ರಸ್ತೆಯಲ್ಲಿ ಗುಂಡಿಗಳಿವೆ ಎಚ್ಚರ...!

 ಗುಳೇದಗುಡ್ಡದ ಚೌ ಬಜಾರದಲ್ಲಿನ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು.
ಗುಳೇದಗುಡ್ಡದ ಚೌ ಬಜಾರದಲ್ಲಿನ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಗುಳೇದಗುಡ್ಡ ಪಟ್ಟಣದ ಜನತೆಯ ಆಕ್ರೋಶ
  • ತಿರುಗಿ ನೋಡದ ಅಧಿಕಾರಿಗಳು
  • ನಿತ್ಯ ಈ ರಸ್ತೆಯಲ್ಲಿ ಶಾಲಾ ವಾಹನಗಳು, ಟಂಟಂಗಳು, ಬೈಕ್‌ಗಳು, ಜನತೆ ಸಂಚರಿಸುತ್ತಾರೆ. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಓಡಾಡುವುದು ಕಷ್ಟವಾಗಿದೆ.
ಗುಳೇದಗುಡ್ಡ:

ಪಟ್ಟಣದ ಪ್ರಮುಖ ರಸ್ತೆಗಳಲ್ಲೊಮ್ಮೆ ಅಡ್ಡಾಡಿದರೆ ಎಲ್ಲೆಂದರಲ್ಲಿ ಕಾಣುವುದು ಆಳವಾದ ಗುಂಡಿಗಳು, ಕಿತ್ತು ಹೋದ ಕಾಂಕ್ರೀಟ್‌ಗಳು. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ‘ಗ್ಯಾರಂಟಿ’.

ಪ್ರಮುಖ ಚೌ ಬಜಾರ್ ರಸ್ತೆಯಲ್ಲಿ ಹಲವು ಕಡೆ ಗುಂಡಿಗಳು ಬಿದ್ದಿದ್ದು, ಮಳೆ ಬಂದರೆ ಈ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ರಸ್ತೆಯಂತೆ ಕಾಣುತ್ತದೆ. ಅಪ್ಪಿತಪ್ಪಿ ವಾಹನ ಸವಾರರು ಹಾಗೂ ಪ್ರಯಾಣಿಕರು ಈ ಗುಂಡಿಯಲ್ಲಿ ಬಿದ್ದರೆ ನರಕ ಯಾತನೆ ಖಚಿತ.
ನಿತ್ಯ ಈ ರಸ್ತೆಯಲ್ಲಿ ಶಾಲಾ ವಾಹನಗಳು, ಟಂಟಂಗಳು, ಬೈಕ್‌ಗಳು, ಜನತೆ ಸಂಚರಿಸುತ್ತಾರೆ. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಓಡಾಡುವುದು ಕಷ್ಟವಾಗಿದೆ. ಮೈಯೆಲ್ಲಾ ಕಣ್ಣಾಗಿಸಿಕೊಂಡೇ ವಾಹನ ಚಲಾಯಿಸಬೇಕು. ಎಚ್ಚರ ತಪ್ಪಿದರೆ ಅಪಾಯ ಎದುರಾಗುವುದು ನಿಶ್ಚಿತ.
ಇನ್ನು ಪಟ್ಟಣದ ನಾಡ ಕಚೇರಿ ಹತ್ತಿರ, ಸರ್ಾ ಬಜಾರ್‌ಗೆ ಹೋಗುವ ಮುಖ್ಯರಸ್ತೆಯನ್ನು ಅಗೆದು ದುರಸ್ತಿ ಮಾಡದೆ ಹಾಗೆಯೇ ಬಿಡಲಾಗಿದೆ. ಕಾಮಗಾರಿ ಮುಗಿದು ಮನೆ ಮನೆಗೆ ನೀರು ಬಂದಿದ್ದರೂ ಈ ರಸ್ತೆ ಅಗೆದಿದ್ದು ಮಾತ್ರ ಹಾಗೆ ಇದೆ. ರಸ್ತೆಯಲ್ಲಿ ಕಾಂಕ್ರಿಟ್ ಕಿತ್ತು ಹೋಗಿದ್ದರಿಂದ ಗುಂಡಿಗಳು ಅಗಲವಾಗುತ್ತಲೇ ಇವೆ. ಇಂತಹ ಅಪಾಯಕಾರಿ ರಸ್ತೆಯಲ್ಲಿಯೇ ವಾಹನ ಸವಾರರು ಸಂಚರಿಸುವ ದುಸ್ಥಿತಿ ಎದುರಾಗಿದೆ.
ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ರಾತ್ರಿ ಸಂಚರಿಸುವಾಗ ರಸ್ತೆಯಲ್ಲಿನ ಗುಂಡಿ ಕಾಣಿಸುತ್ತಿಲ್ಲ. ಇದರಿಂದಾಗಿ ಅಪಘಾತ ಸಂಭವಿಸದ ಉದಾಹರಣೆಗಳು ಸಾಕಷ್ಟಿವೆ. ಪುರಸಭೆ ಅಧಿಕಾರಿಗಳು ರಸ್ತೆಯ ಪರಿಸ್ಥಿತಿಯ ಅರಿವಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"

ಗುಳೇದಗುಡ್ಡ ಪಟ್ಟಣದ ಪ್ರಮುಖ ರಸ್ತೆಗಳ ದುರಸ್ತಿಯ ಬಗ್ಗೆ ಕೆಯುಡಬ್ಲೂಎಸ್‌ಡಿಬಿ ಅಧಿಕಾರಿಗಳೊಂದಿಗೆ ಮಾತನಾಡಿ, ಕಾಮಗಾರಿ ಬಗ್ಗೆ ಮಾಹಿತಿ ಪಡೆದು, ಆದಷ್ಟು ಬೇಗ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಲಾಗುವುದು.
-ವಸಂತ ಪವಾರ ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net