ಮಳೆಗಿಂತ ಗಾಳಿಯದ್ದೇ ಆರ್ಭಟ

ಜಮಖಂಡಿ ತಾಲೂಕಿನ ಜಂಬಿಗಿ ಕೆ.ಡಿ. ಗ್ರಾಮದ ಸರ್ಕಾರಿ ಶಾಲೆಯ ಪತ್ರಾಸ್ ಹಾರಿ ಹೋಗಿರುವುದು.
ಜಮಖಂಡಿ ತಾಲೂಕಿನ ಜಂಬಿಗಿ ಕೆ.ಡಿ. ಗ್ರಾಮದ ಸರ್ಕಾರಿ ಶಾಲೆಯ ಪತ್ರಾಸ್ ಹಾರಿ ಹೋಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಲ್ಲಿ ತೀವ್ರ ಆತಂಕ
  • ನೆಲಕಚ್ಚಿದ ಗಿಡ-ಮರಗಳು
  • ಹಾರಿಹೋದ ಮನೆಗಳ ಮೇಲ್ಛಾವಣಿ ಶೀಟು
ತುಬಚಿ: ಜಮಖಂಡಿ ತಾಲೂಕಿನ ತುಬಚಿ, ಶೂರ್ಪಾಲಿ, ಜಂಬಿಗಿ ಕೆ.ಡಿ. ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಹಠಾತ್ತನೆ ಹವಾಮಾನ ವೈಪರೀತ್ಯ ಉಂಟಾಗಿದ್ದು, ಭೀಕರ ಬಿರುಗಾಳಿ ಸಹಿತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಅತಿಯಾದ ಸೆಕೆಗೆ ತಂಪು ಎರೆಯಬೇಕಿದ್ದ ಮಳೆರಾಯನ ಆಗಮನ, ಈ ಬಾರಿ ಭೀಕರ ಗಾಳಿ ರೂಪದಲ್ಲಿ ಬಂದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಬಾರಿ ಮಳೆಗಿಂತಲೂ ಬಿರುಗಾಳಿಯ ಆರ್ಭಟವೇ ಹೆಚ್ಚಾಗಿದ್ದರಿಂದ ವ್ಯಾಪಕ ಹಾನಿ ಸಂಭವಿಸಿದೆ.

ಅಲ್ಲಲ್ಲಿ ನೆಲಕಚ್ಚಿದ ಗಿಡ-ಮರಗಳು

ರಭಸವಾಗಿ ಬೀಸಿದ ಬಿರುಗಾಳಿ ಭೀಕರತೆಗೆ ರಸ್ತೆ ಬದಿಯ ಹಾಗೂ ತೋಟಗಳಲ್ಲಿದ್ದ ಅನೇಕ ಗಿಡ-ಮರಗಳು ಬೇರು ಸಮೇತ ನೆಲಕಚ್ಚಿವೆ. ಕೆಲವು ಕಡೆ ಬೃಹತ್ ಮರದ ಕೊಂಬೆಗಳು ಮುರಿದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಸಾರಿಗೆ ಸಂಪರ್ಕಕ್ಕೆ ತೀವ್ರ ಅಡಚಣೆಯುಂಟಾಯಿತು. ಇನ್ನು ಕೆಲವು ಗ್ರಾಮಗಳಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆಯೇ ಮರಗಳು ಉರುಳಿದವು ಪರಿಣಾಮ ವಿದ್ಯುತ್ ಸಂಪರ್ಕ ಸಂಪೂರ್ಣ ಅಡಚಣೆಯಾಯಿತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಲು ಸ್ಥಳೀಯರು ಹರಸಾಹಸ ಪಟ್ಟರು.

ಗಾಳಿಗೆ ಹಾರಿದ ಮನೆಗಳ ಪತ್ರಾಸ್

ಗಾಳಿಯ ತೀವ್ರತೆ ಎಷ್ಟಿತ್ತೆಂದರೆ, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ನಿವಾಸಿಗಳ ಮನೆಗಳ ಮೇಲ್ಛಾವಣಿಯ ಪತ್ರಾಸ್‌ಗಳು (ಶೀಟುಗಳು) ಗಾಳಿಯಲ್ಲಿ ನೂರಾರು ಮೀಟರ್ ದೂರದವರೆಗೆ ಹಾರಿ ಹೋಗಿವೆ.
ಮನೆಯ ಮೇಲ್ಛಾವಣಿ ಇಲ್ಲದಂತಾಗಿ, ಇದ್ದಕ್ಕಿದ್ದಂತೆ ಸುರಿದ ಮಳೆಗೆ ಮನೆ ಒಳಗಿದ್ದ ಧಾನ್ಯಗಳು, ಬಟ್ಟೆ-ಬರೆ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ನೆನೆದು ಹಾಳಾಗಿವೆ. ಕಣ್ಣೆದುರೇ ಆಶ್ರಯ ನೀಡಿದ್ದ ಸೂರಿನ ಪತ್ರಾಸ್‌ಗಳು ಹಾರಿ ಹೋಗುತ್ತಿದ್ದರೆ, ಏನು ಮಾಡಬೇಕೆಂದು ತೋಚದೆ ಸಣ್ಣ ಸಣ್ಣ ಮಕ್ಕಳೊಂದಿಗೆ ನಿವಾಸಿಗಳು ಸುರಕ್ಷಿತ ಸ್ಥಳಗಳತ್ತ ಧಾವಿಸಿದ ದೃಶ್ಯಗಳು ಕಂಡು ಬರುತ್ತಿವೆ.
ಪ್ರಕೃತಿಯ ಈ ವಿಕೋಪದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತ ತಕ್ಷಣ ನೆರವಾಗಬೇಕಿದೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ, ಜಂಟಿ ಸಮೀಕ್ಷೆ ನಡೆಸಿ, ನೊಂದ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ಧನ ಹಾಗೂ ಆಶ್ರಯ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net