ಅಂದಿನ ವಚನಗಳೇ ಇಂದಿನ ಶಾಸನಗಳು

ಜಮಖಂಡಿ ಓಲೆಮಠದದ ಜಾತ್ರಾಮಹೋತ್ಸವಕ್ಕೆ ಮಹಾಂತ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶಾಸಕ ಜಗದೀಶ ಗುಡಗುಂಟಿ, ಶಿವಲಿಂಗ ಶ್ರೀಗಳು, ಜಿ.ಎಸ್. ನ್ಯಾಮಗೌಡ ಇತರರಿದ್ದಾರೆ.
ಜಮಖಂಡಿ ಓಲೆಮಠದದ ಜಾತ್ರಾಮಹೋತ್ಸವಕ್ಕೆ ಮಹಾಂತ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶಾಸಕ ಜಗದೀಶ ಗುಡಗುಂಟಿ, ಶಿವಲಿಂಗ ಶ್ರೀಗಳು, ಜಿ.ಎಸ್. ನ್ಯಾಮಗೌಡ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಶರಣೆ ಪ್ರೇಮಕ್ಕ ಅಂಗಡಿ ಹೇಳಿಕೆ
  • ಓಲೆಮಠದ ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭ
ಜಮಖಂಡಿ: ದೇವನ ಪಿತೃತ್ವ ಹಾಗೂ ಮನುಕುಲದ ಭ್ರಾತೃತ್ವ ಸಾರುವುದು 12ನೇ ಶತಮಾನದ ವಚನ ಚಳವಳಿಯ ಉದ್ದೇಶವಾಗಿತ್ತು. ಅಂತೆಯೇ ಅಂದಿನ ವಚನಗಳೆ ಇಂದಿನ ಶಾಸನಗಳಾಗಿವೆ. ಅನುಭವ ಮಂಟಪ ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎನಿಸಿಕೊಂಡಿದೆ ಎಂದು ಬೈಲಹೊಂಗಲದ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ, ಶರಣೆ ಪ್ರೇಮಕ್ಕ ಅಂಗಡಿ ಹೇಳಿದರು.
ನಗರದ ಓಲೆಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರ ಸಂಜೆ ನಡೆದ ಆರು ದಿನಗಳ ಓಲೆಮಠದ ಜಾತ್ರಾಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ವಚನ ಚಳವಳಿಯ ಸಮಗ್ರ ಚಿಂತನೆ ಕುರಿತು ಅನುಭಾವ ಹಂಚಿಕೊಂಡರು.
ಮರೇಗುದ್ದಿಯ ವಿಜಯ ಮಹಾಂತೇಶ್ವರ ಮಠದ ಮಹಾಂತ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಷಟಸ್ಥಲಧ್ವಜ ಶರಣ ಸಂಸ್ಕೃತಿಯ ಸಂಕೇತವಾಗಿದೆ. ಬದ್ಧತೆಯಿಂದ ಬದುಕುವುದೆ ಶರಣ ಸಂಸ್ಕೃತಿ ಎಂದು ಆಶೀರ್ವಚನ ನೀಡಿದರು.
ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ವಚನಗಳ ಮೂಲಕ ಮಾಡಿದ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ. ವಚನಗಳು ಎಂದರೆ ತೂಕದ ಮಾತುಗಳು. ತೂಕದ ಮಾತುಗಳಿಂದ ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧ್ಯ ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಿನ್ನಾಭಿಪ್ರಾಯ ಮರೆತು ಧರ್ಮದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿ ನಿಲ್ಲಬೇಕು. ದೇಶ ಉಳಿದರೆ ಧರ್ಮ ಉಳಿಯುತ್ತದೆ. ಧರ್ಮ ಉಳಿದರೆ ಮನುಕುಲ ಉಳಿಯುತ್ತದೆ. ಆದ್ದರಿಂದ ಎಲ್ಲರೂ ದೇಶದ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. ಹಿರಿಯ ವಕೀಲ ಎನ್.ಎಸ್. ದೇವರವರ ಮಾತನಾಡಿದರು.
ಶೂರ್ಪಾಲಿಯ ಸಾರಂಗ ಮಠದ ಮಾತೋಶ್ರೀ ಸುನಂದಮ್ಮತಾಯಿ ಸಾನ್ನಿಧ್ಯ ವಹಿಸಿದ್ದರು. ಪೌರಕಾರ್ಮಿಕರು ಸಾಮೂಹಿಕವಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದು ವಿಶೇಷವಾಗಿತ್ತು.
ವಿಧಾನ ಪರಿಷತ್ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ವಕೀಲ ಟಿ.ಪಿ. ಬಾಂಗಿ, ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ. ತುಪ್ಪದ, ಕುಂಬಾರ ಸಮಾಜದ ಅಧ್ಯಕ್ಷ ಬಸವರಾಜ ಹೊಳೆಪ್ಪಗೋಳ, ರೈತ ಮುಖಂಡ ಬಿ.ಎಸ್. ಸಿಂಧೂರ, ಕಾನಿಪ ಸಂಘದ ಅಧ್ಯಕ್ಷ ಲಕ್ಷ್ಮೀ ಕಾಂತ ದುದಗಿ, ಮಹಾಪ್ರಸಾದದ ದಾಸೋಹಿ ಪ್ರೊ.ಬಸವರಾಜ ಕಡ್ಡಿ, ಶ್ರೀಕಾಂತ ಘಾಟಗೆ, ಸವಿತಾ ಅಂಗಡಿ, ದಾಕ್ಷಾಯಿಣಿ ಹುಲಗನ್ನವರ, ಮೇಘಾ ಮಹಾಬಳಶೆಟ್ಟಿ, ಡಾ.ನೇಹಾ ಲಾಡ, ಶೋಭಾ ಬಿರಾದಾರ, ಶಿಕ್ಷಕಿ ಶೋಭಾ ಕಾಗಿ, ರವಿ ಯಡಹಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net