ಹಾಗೆಯೇ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಹಾಗೂ ಜಮಖಂಡಿ ನಗರಕ್ಕೆ ಸಂಪರ್ಕ ಕಲ್ಪಿಸಲು ಜಿಲ್ಲೆಯ ಅತ್ಯಂತ ವಾಹನ ಮತ್ತು ಜನದಟ್ಟನೆ ಕೇಂದ್ರವಾಗಿರುವ ಬಾಗಲಕೋಟೆ ತಾಲೂಕಿನ ಗದ್ದಿನಕೇರಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 218ನ್ನು ಬಂದ್ ಮಾಡಿದ ರೈತರು ಕೆಲ ಗಂಟೆ ಪ್ರತಿಭಟನೆ ನಡೆಸಿದರು. ಇಲ್ಲಿ ಕ್ಷಣಕ್ಷಣಕ್ಕೂ ಪ್ರತಿಭಟನೆ ಕಾವು ತೀವ್ರಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಯಿತು. ಬೆಳಗ್ಗೆ ಶಾಂತವಾಗಿದ್ದ ಪ್ರತಿಭಟನೆ ಹೊತ್ತು ಕಳೆದಂತೆ ತೀವ್ರವಾಗತೊಡಗಿತು. ಮಧ್ಯಾಹ್ನ ಸರ್ಕಾರದ ವಿರುದ್ಧ ಅಕ್ರೋಶಗೊಂಡ ರೈತರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಅವರ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು.