ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷ ಸೋತಿದೆ..!

ಮಾಜಿ ಶಾಸಕ ವೀರಣ್ಣ ಚರಂತಿಮಠ
ಮಾಜಿ ಶಾಸಕ ವೀರಣ್ಣ ಚರಂತಿಮಠ
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ವೀರಣ್ಣ ಚರಂತಿಮಠ ಅಭಿಮತ
  • ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ಖಚಿತ
  • ಮತದಾನ ಹೆಚ್ಚಳಕ್ಕೆ ಜಾಗೃತಿ
ಬಾಗಲಕೋಟೆ: ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷ ಸೋತಿರುವ ಉದಾಹರಣೆ ಸಾಕಷ್ಟಿವೆ. ವಿರೋಧ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದು ಇದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಈಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಬಗ್ಗೆ ಆಡಳಿತ ಪಕ್ಷಕ್ಕೆ ಸವಾಲು ಎಸೆದಿರುವುದನ್ನು ಸಮರ್ಥಿಸಿಕೊಂಡ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದರಲ್ಲಿ ನಿಮಗೇಕೆ ಸಂಶಯ? ಎಂದು ಪ್ರಶ್ನಿಸಿದರು.
ವಿಜಯೇಂದ್ರ ಬಿಜೆಪಿಯ ರಾಜ್ಯ ಅಧ್ಯಕ್ಷರು ಇದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಮಾಹಿತಿ ಕಲೆ ಹಾಕಿರುತ್ತಾರೆ. ಹೀಗಾಗಿ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸದಿಂದ ಹೇಳಿದ್ದಾರೆ ಎಂದರು.
ಫೆ. 13ಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ಬಾಗಲಕೋಟೆ ನಗರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಬೇಕಿತ್ತು. ಆದರೆ, ಅನಿವಾರ್ಯ ಕಾರಣದಿಂದ ಆಗಿಲ್ಲ. ಉಪ ಚುನಾವಣೆ ಪೂರ್ವದಲ್ಲೇ ನಗರಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, 3 ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸಿ ಉಪ ಚುನಾವಣೆ ಬಗ್ಗೆ ಕಾರ್ಯಕರ್ತರಿಗೆ ಉತ್ಸಾಹ ತುಂಬಲಿದ್ದಾರೆ ಎಂದು ತಿಳಿಸಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಅಂದಾಜು 7 ಸಾವಿರಕ್ಕೂ ಅಧಿಕ ಡಬಲ್ ಮತದಾರರ ಹೆಸರು ಇರುವ ಬಗ್ಗೆ ದೂರು ನೀಡಿದ್ದರ ಬಗ್ಗೆ ಪ್ರಶ್ನಿಸಿದಾಗ, ಇದು ನಡೆದಿದೆ. ಈಗಾಗಲೇ ಡಬಲ್ ಇದ್ದ ಹೆಸರನ್ನು ಕಡಿಮೆ ಮಾಡುವ ಪ್ರಕ್ರಿಯೆ ನಡೆದಿದೆ. ಹಾಗೆಯೇ ಹೊಸ ಮತದಾರರ ಸೇರ್ಪಡೆ ಕಾರ್ಯವೂ ಸಾಗಿದೆ. ಚುನಾವಣೆಗೆ ಇನ್ನೂ ಹತ್ತು ದಿನಗಳು ಇರುವವರೆಗೂ ಇದು ಮುಂದುವರಿಯುವ ಪ್ರಕ್ರಿಯೆ ಎಂದರು.
ಮುಖ್ಯವಾಗಿ ಮತದಾರರ ಪಟ್ಟಿ ಮೂರು ರೀತಿಯಲ್ಲಿ ಪರಿಶೀಲನೆ ನಡೆದಾಗ ನಿಖರ ಮತದಾರರ ಸಂಖ್ಯೆ ತಿಳಿಯುತ್ತದೆ. ಮೊದಲನೆಯದಾಗಿ ಕ್ಷೇತ್ರದಿಂದ ಬೇರೆ ಕಡೆಗೆ ಹೋಗಿರುವವರ ಹೆಸರು ಕಡಿಮೆ ಮಾಡಬೇಕು. ನಿಧನ ಹೊಂದಿದವರ ಹೆಸರು ಡಿಲಿಟ್ ಮಾಡಬೇಕು. ಹಾಗೆಯೇ ಪಟ್ಟಿಯಲ್ಲಿ ಡಬಲ್ ಇರುವ ಹೆಸರು ಕಡಿಮೆ ಮಾಡಬೇಕು. ಇದಾದಾಗ ಬಾಗಲಕೋಟೆ ನಗರ ಪ್ರದೇಶದಲ್ಲೂ ಸಹ ಮತದಾನದ ಪ್ರಮಾಣ ಹೆಚ್ಚಾಗುವ ಅಂಕಿ ಸಂಖ್ಯೆ ಸಿಗುತ್ತದೆ. ಅದಾಗ್ಯೂ ಮುಂಬರುವ ಉಪ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಮತದಾರರನ್ನು ಹೆಚ್ಚು ಹೆಚ್ಚಾಗಿ ಮತದಾನ ಮಾಡುವಂತೆ ಮನವೊಲಿಸುವ ಮತ್ತು ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲೂ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ. ಆದರೆ, ಅದು ಮುಂಬರುವ ಉಪ ಚುನಾವಣೆಯಲ್ಲಿ ಜಾರಿಗೆ ಬರುವುದಿಲ್ಲ. 2028ರ ವಿಧಾನಸಭೆ ಚುನಾವಣೆ ಹೊತ್ತಿಗೆ ಸಂಪೂರ್ಣ ಪರಿಷ್ಕೃತ ಮತದಾರರ ಪಟ್ಟಿಯಂತೆ ಚುನಾವಣೆ ನಡೆಯಲಿದೆ. ಎಸ್‌ಐಆರ್ ವೇಳೆ ನಿಧನ ಹೊಂದಿದವರು, ಡಬಲ್ ಹೆಸರು ಇರುವ ಹಾಗೂ ಶಿಫ್ಟ್ ಆಗಿರುವ ಮತದಾರರ ಸಂಪೂರ್ಣ ಪರಿಷ್ಕೃತಗೊಳ್ಳಲಿದೆ. ಎಸ್‌ಐಆರ್‌ಗೆ ಯಾರೇ ವಿರೋಧ ಮಾಡಿದರೂ ಅದು ನಿಲ್ಲುವುದಿಲ್ಲ. ಈ ಬಗ್ಗೆ ಈಚೆಗೆ ನ್ಯಾಯಾಲಯವೇ ಸ್ಪಷ್ಟವಾಗಿ ಹೇಳಿದೆಯಲ್ಲ ಎಂದು ತಿಳಿಸಿದರು.
ಬಾಗಲಕೋಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಆಯ್ಕೆ ಇನ್ನು ಆಗಿಲ್ಲ. ಚುನಾವಣೆ ಪೂರ್ವ ಅಥವಾ ಚುನಾವಣೆ ದಿನಾಂಕ ಘೋಷಣೆ ಬಳಿಕವೇ ವರಿಷ್ಠರು ಅಭ್ಯರ್ಥಿ ಹೆಸರನ್ನು ಘೋಷಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net