ಪ್ರಧಾನಿ ಹೇಳುವ ಅಚ್ಛೆ ದಿನ್ ಬರಲೇ ಇಲ್ಲ...!

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಸಚಿವ ಆರ್.ಬಿ. ತಿಮ್ಮಾಪೂರ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ ಮತ್ತಿತರರು ಇದ್ದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಸಚಿವ ಆರ್.ಬಿ. ತಿಮ್ಮಾಪೂರ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ. ಪಾಟೀಲ ವಾಗ್ಬಾಣ
  • ದೊಡ್ಡ ಉದ್ಯಮಗಳ ಸಾಲ ಮನ್ನ ಮಾಡಿದ್ದೇ ಮೋದಿ ಸಾಧನೆ
  • ಕಾಂಗ್ರೆಸ್ ಸಾಧನೆ ಹರವಿದ ಎಂಬಿಪಿ
ಬಾಗಲಕೋಟೆ: ಗುಂಡಿ ಸೂಜಿ ಕೂಡಾ ಉತ್ಪಾದನೆ ಆಗದಿದ್ದ ಭಾರತಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟು ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು, ಸರ್ಕಾರದ ಸಂಸ್ಥೆಗಳು, ಬ್ಯಾಂಕ್ ರಾಷ್ಟ್ರೀಕರಣ, ದೇಶದ ಜನರಿಗೆ ಸಂಪೂರ್ಣ ಆಹಾರ ಒದಗಿಸುವ ಆಹಾರ ಭದ್ರತೆ, ಉದ್ಯೋಗ ಖಾತರಿ, ಪಡಿತರ ಚೀಟಿ, ಪಿಂಚಣಿ ಯೋಜನೆಗಳು ಸೇರಿ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದ ಕಾಂಗ್ರೆಸ್ ಪಕ್ಷ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಮತ ಯಾಚನೆಗೆ ಆಗಮಿಸಿದ್ದ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಸಿಕ್ಕಾಗಿ ನಮ್ಮ ದೇಶಕ್ಕೆ ಅಮೆರಿಕದಿಂದ ಗೋಽ ಬರುತ್ತಿತ್ತು. ಜವಹರಲಾಲ ನೆಹರು, ಲಾಲ್ ಬಹದ್ದೂರ ಶಾಸ್ತ್ರೀ ಸೇರಿ ಕಾಂಗ್ರೆಸ್ ಸರ್ಕಾರ ದೂರದೃಷ್ಟಿಯ ಯೋಜನೆಗಳಿಂದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಗರೀಬಿ ಹಠಾವೋ, 20 ಅಂಶಗಳ ಕಾರ್ಯಕ್ರಮಗಳು, ಪಂಚ ವಾರ್ಷಿಕ ಯೋಜನೆಗಳು ಜಾರಿಗೆ ತಂದು ದೇಶವನ್ನು ಸಮೃದ್ಧಿಗೊಳಿಸಿದರು ಎಂದರು.
ಅದರಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಎಚ್‌ಎಎಲ್, ಬಿಎಚ್‌ಎಲ್, ಬಿಇಎಂಎಲ್, ಇಸ್ರೋ, ಎಚ್‌ಎಂಟಿ ಸೇರಿ ಅನೇಕ ಸಂಸ್ಥೆಗಳು ಕಾಂಗ್ರೆಸ್ ಕೊಡುಗೆ. ನರೇಗಾ, ಆಧಾರ ಕಾರ್ಡ್ ಸಹ ಕಾಂಗ್ರೆಸ್ ಕೊಡುಗೆ ಎಂದು ತಿಳಿಸಿದರು.
ಇಂತ ಯಾವುದೇ ಕೆಲಸವನ್ನು ಮಾಡದ ನರೇಂದ್ರ ಮೋದಿ 12 ವರ್ಷಗಳ ಕಾಲ ದೇಶ ನೆನಪಿಡುವ ಯಾವ ಕೆಲಸವನ್ನೂ ಮಾಡಿಲ್ಲ. ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ವಾರ್ಷಿಕ 2 ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ರೂ. ಅಚ್ಛೆ ದಿನ್ ಯಾವುದು ಮಾಡಲಿಲ್ಲ. 60 ರೂ. ಇದ್ದ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿಸಿದರು. 400 ರೂ. ಇದ್ದ ಗ್ಯಾಸ್ ಬೆಲೆ ಸಾವಿರದ ಗಡಿಗೆ ಬಂದಿತು. ನೋಟ್ ಬ್ಯಾನ್ ಮಾಡಿ ಕೋಟ್ಯಂತರ ಜನರ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದರು.
ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾದಾಗ ರೈತರ 70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಮೋದಿ ಅವರೂ ಸಹ 20 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು. ಅದು ಯಾರ ಸಲುವಾಗಿ ಅದಾನಿ, ಅಂಬಾನಿ ಸೇರಿ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ. ಡಾಲರ್ ರೇಟ್ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ದ ಮೋದಿ ಅವರು ಇದೀಗ ಡಾಲರ್ ಬೆಲೆ 94 ರೂ. ಏರಿಕೆ ಆಗಿದ್ದರೂ ಆ ಬಗ್ಗೆ ಮಾತನಾಡಲ್ಲ ಎಂದು ಚುಚ್ಚಿದರು.
ಇರಾನ್ ಜೊತೆ ಭಾರತ ಒಳ್ಳೆಯ ಸಂಬಂಧ ಹೊಂದಿತ್ತು. ಮೋದಿ ಅವರು ಇಸ್ರೆಲ್‌ಗೆ ಹೋಗಿ ಭಾರತ ಜಗತ್ತಿನ ತಾಯಿ ಎಂದಿದ್ದು ಸರಿ. ಆದರೆ, ಇಸ್ರೇಲ್ ಜಗತ್ತಿನ ತಂದೆ ಅಂದು ಬಿಟ್ಟರು. ಮರು ದಿನವೇ ಯುದ್ಧ ಆರಂಭವಾಯಿತು. ಅದಾಗ್ಯೂ ಇರಾನ್ ಭಾರತ ನಮ್ಮ ಸ್ನೇಹಿತ ದೇಶ ಎಂದಿತು. ಹೀಗಾಗಿಯೇ ಇವತ್ತು ಇಂಧನ ಸಿಗುತ್ತಿರುವುದು ಇರಾನ್‌ನಿಂದಾಗಿ. ಒಂದು ವೇಳೆ ಮೋದಿ ಮೇಲಿನ ಸಿಟ್ಟಿಗೆ ನಮಗೆ ಇಂಧನ ಕೊಡದೇ ಇದ್ದಿದ್ದರೆ ನಮ್ಮ ದೇಶದ ಪರಿಸ್ಥಿತಿ ಇವತ್ತು ಏನಾಗುತ್ತಿತ್ತು? ಮೋದಿ ಅವರು ಆಡಳಿತದಲ್ಲಿ ಬರೀ ಇಂಥದ್ದೆ ಅದ್ವಾನಗಳು ಆಗಿವೆ ಎಂದರು.
ಮೋದಿ ಅವರು ಈ ಹಿಂದೆ ತಾವು ಚಹಾ ಮಾರುವಾಗ ಚರಂಡಿ ಮೇಲೆ ಪೈಪ್ ಹಾಕಿ ಗ್ಯಾಸ್ ಉತ್ಪಾದನೆ ಮಾಡುತ್ತಿದ್ದರು ಎಂದು ಹೇಳಿದ್ದರು. ಇವತ್ತು ಮೋದಿ ಅವರ ವಿದೇಶಾಂಗ ನೀತಿಗಳನ್ನು ನೋಡಿದರೆ ಈಗ ಚರಂಡಿ ಮೇಲೆ ಪೈಪ್ ಹಾಕಿ ಗ್ಯಾಸ್ ಉತ್ಪಾದನೆ ಮಾಡುವ ಸ್ಥಿತಿಗೆ ತಂದಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ, ನಾಗರಾಜ ಹದ್ಲಿ ಮತ್ತಿತರರು ಇದ್ದರು.

ಸಾಲ ಮಾಡಿಯಾದರೂ ಕೃಷ್ಣಾ ಯೋಜನೆ

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನಕ್ಕೆ ನಮ್ಮ ಸರ್ಕಾರ ಎಕರೆಗೆ 30 ಮತ್ತು 40 ಲಕ್ಷ ರೂ. ಪರಿಹಾರ ನಿಗದಿ ಪಡಿಸಿ, ಆರಂಭಿಕ 400 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂ. ಇಟ್ಟಿದ್ದೇವೆ. ಪೂರಕ ಬಜೆಟ್‌ನಲ್ಲಿ ಇನ್ನು ಹೆಚ್ಚಿಗೆ ಹಣ ನೀಡುವಾಗಿ ಸಿಎಂ ಹೇಳಿದ್ದಾರೆ. ಇದು ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net