ಅದ್ದೂರಿ ಐತಿಹಾಸಿಕ ಗುಹೇಶ್ವರ ಜಾತ್ರೆ

 ಜಮಖಂಡಿ ತಾಲೂಕಿನ ಕಂಕಣವಾಡಿ ಗುಹೇಶ್ವರ ಜಾತ್ರೆಯಲ್ಲಿ ಶತಮಾನದಿಂದ ಆಚರಿಸಿಕೊಂಡು ಬಂದ  ಸಂಪ್ರದಾಯದಂತೆ ಭಕ್ತರು ಸಾಲಿನಲ್ಲಿ ಕುಳಿತು ಶಿಸ್ತುಬದ್ಧವಾಗಿ ಹುಗ್ಗಿ ಪ್ರಸಾದ ಸವಿಯುತ್ತಿರುವುದು.
ಜಮಖಂಡಿ ತಾಲೂಕಿನ ಕಂಕಣವಾಡಿ ಗುಹೇಶ್ವರ ಜಾತ್ರೆಯಲ್ಲಿ ಶತಮಾನದಿಂದ ಆಚರಿಸಿಕೊಂಡು ಬಂದ ಸಂಪ್ರದಾಯದಂತೆ ಭಕ್ತರು ಸಾಲಿನಲ್ಲಿ ಕುಳಿತು ಶಿಸ್ತುಬದ್ಧವಾಗಿ ಹುಗ್ಗಿ ಪ್ರಸಾದ ಸವಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಂಕಣವಾಡಿ ನಡುಗಡ್ಡೆಯಲ್ಲಿರುವ ಸುಕ್ಷೇತ್ರ
  • 50 ಕ್ವಿಂಟಾಲ್ ಹುಗ್ಗಿ ಅನ್ನ ದಾಸೋಹ
  • ಅಸಂಖ್ಯಾತ ಭಕ್ತರ ಆಗಮನ
ಜಮಖಂಡಿ: ತಾಲೂಕಿನ ಕಂಕಣವಾಡಿ ನಡುಗಡ್ಡೆಯ ಐತಿಹಾಸಿಕ ಶ್ರೀ ಗುಹೇಶ್ವರ ಜಾತ್ರೆ ಮಹೋತ್ಸವ ಸಾವಿರಾರು ಭಕ್ತರ ಭಕ್ತಿ ಭಾವದ ಮಧ್ಯೆ ಸಂಭ್ರಮ, ಸಡಗರದಿಂದ ಭಾನುವಾರ ನೆರವೇರಿತು.
ಬೆಳಗ್ಗೆ 7 ಗಂಟೆಗೆ ಶ್ರೀ ಗುಹೇಶ್ವರ ಜ್ಯೋತಿರ್ಲಿಂಗಕ್ಕೆ ವಚನ ಲಿಂಗಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು. ಮಧ್ಯಾಹ್ನ ವಚನ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವದೊಂದಿಗೆ ಅದ್ದೂರಿಯಾಗಿ ನಡೆಯಿತು.
ಜಿಲ್ಲೆಯಾದ್ಯಂತ ಹುಗ್ಗಿ ಪ್ರಸಾದದ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಕಂಕಣವಾಡಿ ನಡುಗಡ್ಡೆಯ ಗುಹೇಶ್ವರ ಜಾತ್ರೆ, ಈ ವರ್ಷವೂ ಅಪಾರ ಸಂಖ್ಯೆಯ ಭಕ್ತರೊಂದಿಗೆ ಭಕ್ತಿ ಮತ್ತು ಸಂಸ್ಕೃತಿಯ ಮಹತ್ವ ಸಾರಿತು.
ಕೃಷ್ಣಾ ನದಿಯ ನಡುಗಡ್ಡೆಯಲ್ಲಿರುವ ಪುಣ್ಯಕ್ಷೇತ್ರಕ್ಕೆ ಭಕ್ತರ ಸುಲಭ ಸಂಚಾರಕ್ಕಾಗಿ ಗ್ರಾಮದ ರೈತರೇ ನಿರ್ಮಿಸಿರುವ ತಾತ್ಕಾಲಿಕ ಬ್ಯಾರೇಲ್ ಸೇತುವೆಯನ್ನು ಬಳಸಿ, ಭಕ್ತರು ಕಾಲ್ನಡಿಗೆಯಲ್ಲಿ ದೇವರ ದರ್ಶನ ಪಡೆದರು. ನದಿಯಾಚೆಯ ತುಬಚಿ, ಮುತ್ತೂರ, ಶೂರ್ಪಾಲಿ ಸೇರಿ ವಿವಿಧ ಗ್ರಾಮಗಳಿಂದ ಬರುವ ಭಕ್ತರಿಗೆ ಬೋಟ್ ವ್ಯವಸ್ಥೆ ಮಾಡಲಾಗಿತ್ತು.

ಹುಗ್ಗಿ ಜಾತ್ರೆ ಎಂದೇ ಪ್ರಸಿದ್ಧಿ

ಸುಕ್ಷೇತ್ರ ಕಂಕಣವಾಡಿಯ ಶ್ರೀ ಗುಹೇಶ್ವರ ಜಾತ್ರೆಯನ್ನು ಈ ಭಾಗದಲ್ಲಿ ಹುಗ್ಗಿ ಜಾತ್ರೆ ಎಂದೇ ಕರೆಯುತ್ತಾರೆ. ಕಾರಣ ಭಕ್ತರಿಗಾಗಿ ವಿಶೇಷವಾಗಿ 50 ಕ್ವಿಂಟಾಲ್ ಹುಗ್ಗಿ, 40 ಕ್ವಿಂಟಾಲ್ ಅನ್ನ, ಹಾಗೂ ಬೃಹತ್ ಪಾತ್ರೆಗಳಲ್ಲಿ ಸಿದ್ಧಪಡಿಸಿದ ರುಚಿಯುಕ್ತ ಸಾಂಬಾರನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು. ಮಧ್ಯಾಹ್ನ 12 ರಿಂದ ಮಧ್ಯರಾತ್ರಿ 12 ರವರೆಗೆ ನಿರಂತರ ಅನ್ನಪ್ರಸಾದ ವ್ಯವಸ್ಥೆ ನಡೆಯಿತು.

ನೆಲದ ಮೇಲೆ ಕುಳಿತು ಊಟ

ಜಾತ್ರೆಯ ವಿಶೇಷವೆಂದರೆ, ಶತಮಾನಗಳಿಂದಲೂ ಈ ಜಾತ್ರೆಗೆ ಬರುವ ಭಕ್ತರನ್ನು ಸರದಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಕುಳ್ಳಿರಿಸಿ ಪ್ರಸಾದವನ್ನು ಬಡಿಸಲಾಗುತ್ತದೆ. ದೊಡ್ಡವರು-ಚಿಕ್ಕವರು ಎಂಬ ಭೇದವಿಲ್ಲದೆ ಸಾವಿರಾರು ಭಕ್ತರು ಆಗಮಿಸಿದ್ದರೂ ಯಾವುದೇ ಗದ್ದಲವಿಲ್ಲದೆ ಶಿಸ್ತಿನಿಂದ ಭಕ್ತರು ಪ್ರಸಾದ ಸೇವಿಸುತ್ತಾರೆ. ಜವಾಬ್ದಾರಿ ಹೊತ್ತುಕೊಂಡ ಸ್ವಯಂ ಸೇವಕರ ಸೇವಾ ಮನೋಭಾವ ಪ್ರಶಂಸೆಗೆ ಅರ್ಹವಾಗಿತ್ತು.

ತವರಿನ ಸಂಭ್ರಮ

ಕಂಕಣವಾಡಿ ಗ್ರಾಮ ದೇವತೆ ಉತ್ಸವಕ್ಕೆ ಮದುವೆಯಾದ ಬಳಿಕ ಹೊರ ಊರಿನಲ್ಲಿ ನೆಲೆಸಿರುವ ಮಹಿಳೆಯರು ಉತ್ಸವಕ್ಕೆ ತವರಿಗೆ ಆಗಮಿಸಿ, ಕುಟುಂಬದವರೊಂದಿಗೆ ಬೆರೆತು, ಸಂತೋಷದಿಂದ ಕುಟುಂಬದವರೊಂದಿಗೆ ಸೇರಿ ಜಾತ್ರೆ ಆಚರಿಸಿ, ಒಟ್ಟಾಗಿ ಕುಳಿತು ಪ್ರಸಾದ ಸವಿಯುವ ಸಂಪ್ರದಾಯ ಇನ್ನೂ ಪ್ರಚಲಿತದಲ್ಲಿರುವುದು ವಿಶೇಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net