ಜಿಲ್ಲೆಯಲ್ಲಿ ಹಸಿರು ಪರಿಸರ ನಿರ್ಮಾಣ ಗುರಿ

ಬಾಗಲಕೋಟೆ ಜಿಲ್ಲಾಡಳಿತ, ಜಿ.ಪಂ., ಅರಣ್ಯ ಇಲಾಖೆ ಹಾಗೂ ನಾಯನೇಗಲಿ ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಬುಧವಾರ ತಾಲೂಕಿನ ಮಲ್ಲಯ್ಯನ ಗುಡ್ಡದಲ್ಲಿ ವಿವಿಧ ಜಾತಿಗಳ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು. ಜಿಪಂ ಸಿಇಒ ಶಶಿಧರ ಕುರೇರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ ಮತ್ತಿತರರು ಇದ್ದರು.
ಬಾಗಲಕೋಟೆ ಜಿಲ್ಲಾಡಳಿತ, ಜಿ.ಪಂ., ಅರಣ್ಯ ಇಲಾಖೆ ಹಾಗೂ ನಾಯನೇಗಲಿ ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಬುಧವಾರ ತಾಲೂಕಿನ ಮಲ್ಲಯ್ಯನ ಗುಡ್ಡದಲ್ಲಿ ವಿವಿಧ ಜಾತಿಗಳ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು. ಜಿಪಂ ಸಿಇಒ ಶಶಿಧರ ಕುರೇರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಅಭಿಮತ
  • ಸಕ್ಕರೆ ಕಾರ್ಖಾನೆಗಳ ಸಿಎಸ್‌ಆರ್ ಅನುದಾನ ಬಳಕೆ
  • ಮಲ್ಲಯ್ಯನ ಗುಡ್ಡದಲ್ಲಿ ಎರಡು ಸಾವಿರ ಸಸಿ ನೆಡಲು ಚಾಲನೆ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಹಸಿರು ಪರಿಸರ ನಿರ್ಮಾಣದ ಗುರಿ ಹೊಂದಲಾಗಿದೆ. ಗುಡ್ಡದ ಪ್ರದೇಶಗಳಲ್ಲಿ ಸಸಿ ನೆಡುವುದರಿಂದ ಮಣ್ಣು ಕೊಚ್ಚುವಿಕೆ ತಡೆಯುವುದರ ಜೊತೆಗೆ ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಹವಾಮಾನ ಸಮತೋಲನಕ್ಕೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ತಾಲೂಕಿನ ಹಳೇ ಮಲ್ಲಾಪುರ ಗ್ರಾಮದಲ್ಲಿ ಮಲ್ಲಯ್ಯನ ಗುಡ್ಡದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ನಾಗರಾಳ-ನಾಯನೇಗಲಿ ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ವಿವಿಧ ಜಾತಿಗಳ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಪ್ರತಿಯೊಂದು ಸಕ್ಕರೆ ಕಾರ್ಖಾನೆಗಳ ಸಿಎಸ್‌ಆರ್ ಅನುದಾನಡಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಗಿಡ, ಮರಗಳನ್ನು ಬೆಳೆಸಲು ಎಲ್ಲ ಕಾರ್ಖಾನೆಗಳಿಗೆ ತಿಳಿಸಲಾಗಿತ್ತು. ಅದರಂತೆ ಈಗ ನಾಯನೇಗಲಿ ಇಐಡಿ ಪ್ಯಾರಿ ಶುಗರ್ಸ್‌ ಇಂಡಿಯಾ ಲಿಮಿಟೆಡ್‌ನವರು ಮಲ್ಲಯ್ಯನ ಗುಡ್ಡದಲ್ಲಿ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ವಿಷಯ ಎಂದರು.
ಇದೇ ರೀತಿ ಅರಣ್ಯ ಇಲಾಖೆ ಹಾಗೂ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮೆಲ್‌ಬ್ರೋ ಸಕ್ಕರೆ ಕಾರ್ಖಾನೆಯವರಿಗೆ ಮುಚಖಂಡಿ ಕೆರೆ ಆವರಣ, ಬಾಡಗಂಡಿಯ ಬೀಳಗಿ ಶುಗರ್ಸ್‌ನವರಿಗೆ ಬಾಡಗಂಡಿ ಮತ್ತು ಚಿಕ್ಕಸಂಗಮ, ಜೆಮ್ಸ್ ಶುಗರ್ಸ್‌ಗೆ ಸುನಗ ಮತ್ತು ವಾರಿ ಮಲ್ಲಯ್ಯನಗುಡ್ಡ, ಬಾದಾಮಿ ಶುಗರ್ಸ್‌ಗೆ ಬಾದಾಮಿ ಗುಹೆಯ ಹತ್ತಿರ, ಕೇದಾರನಾಥ ಶುಗರ್ಸ್‌ಗೆ ಲಿಂಗಾಪುರದಲ್ಲಿ ಸಸಿ ನೆಡಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.
ಕೇನ್ ವರ್ ಲಿಮಿಟೆಡ್‌ಗೆ ಕುಳಗೇರಿ ಕ್ರಾಸ್, ನಿರಾಣಿ ಶುಗರ್ಸ್‌ಗೆ ಮುಧೋಳ, ಇಂಡಿಯನ್ ಕೇನ್ ಪಾವರ್‌ಗೆ ಉತ್ತೂರು, ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮುದ್ದಾಪೂರ, ಜಮಖಂಡಿ ಶುಗರ್ಸ್‌ಗೆ ಸಾವಳಗಿ ಮತ್ತು ಖಾಜಿಬೀಳಗಿ, ಪ್ರಭುಲಿಂಗೇಶ್ವರ ಶುಗರ್ಸ್‌ಗೆ ಸಿದ್ದಾಪೂರ, ಕುಳಲಿ, ಗೋದಾವರಿ ಶುಗರ್ಸ್‌ನವರು ತೇರದಾಳ ಮತ್ತು ಬೆಳಗಲಿ ಗುಡ್ಡ ಹಾಗೂ ಸಾಯಿಪ್ರಿಯಾ ಶುಗರ್ಸ್‌ಗೆ ಮರೆಗುದ್ದಿ ಗ್ರಾಮದಲ್ಲಿ ಸಸಿಗಳನ್ನು ನೆಡಲಿದ್ದಾರೆಂದು ಹೇಳಿದರು.
ಜಿ.ಪಂ. ಸಿಇಒ ಶಶಿಧರ ಕುರೇರ ಮಾತನಾಡಿ, ಮಲ್ಲಯ್ಯನ ಗುಡ್ಡದ ಹತ್ತಿರ ಆಲಮಟ್ಟಿ ಹಿನ್ನೀರು ಇರುವುದರಿಂದ ಸುಂದರವಾದ ಗಾರ್ಡನ್ ಮಾಡಲು ಅವಕಾಶವಿದೆ. ಈ ಗುಡ್ಡದಲ್ಲಿ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಸುತ್ತಲೂ ಪರಿಸರ ಬೆಳೆಸಿ, ಹಸರೀಕರಣಕ್ಕಾಗಿ ಕ್ರಮಕೈಗೊಂಡರೆ ಸುಂದರವಾದ ವಾತಾವರಣ ಸೃಷ್ಟಿಯಾಗುತ್ತದೆ. ಆ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರೂಪಾ ಡಿ., ಎಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್‌ನ ಅಧಿಕಾರಿಗಳು ಮುಖಂಡರಾದ ಮಲ್ಲಿಕಾರ್ಜುನ ಮೇಟಿ, ಶ್ರೀನಿವಾಸ ಬಳ್ಳಾರಿ, ನಾಗರಾಜ ಹದ್ಲಿ, ಡಾ. ಶೇಖರ ಮಾನೆ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net