ಘಟಪ್ರಭೆ ಒಡಲು ಮಲಿನ...!

ಮುಧೋಳ ಯಾದವಾಡ ರಸ್ತೆಯ ಸಿದ್ಧೇಶ್ವರ ಬ್ಯಾರೇಜ್-ಕಂ-ಬ್ರಿಜ್ ಬಳಿ ಘಟಪ್ರಭಾ ನದಿಯ ಸ್ಥಿತಿ.
ಮುಧೋಳ ಯಾದವಾಡ ರಸ್ತೆಯ ಸಿದ್ಧೇಶ್ವರ ಬ್ಯಾರೇಜ್-ಕಂ-ಬ್ರಿಜ್ ಬಳಿ ಘಟಪ್ರಭಾ ನದಿಯ ಸ್ಥಿತಿ.
Published on

ಪ್ರಮುಖ ಮುಖ್ಯಾಂಶಗಳು

  • ನದಿಯಲ್ಲಿ ಬಿಳಿ ಬಣ್ಣದ ದಟ್ಟವಾದ ನೊರೆ
  • ಮುಧೋಳ ಆಯುಕ್ತರ ನಿರ್ಲಕ್ಷೃ
  • ರೋಗಗಳ ಭೀತಿ
ಮುಧೋಳ: ಅವಳು ಸ್ವಚ್ಛಂದವಾಗಿ ಹರಿದು ಕೃಷಿ, ಸಕಲ ಜೀವರಾಶಿಗಳಿಗೆ ಜೀವ ನೀಡುತ್ತಾಳೆ. ನಿತ್ಯವು ಅಮೃತಮಯ ಜೀವಜಲ ನೀಡಬೇಕು ಎನ್ನುವ ಬಯಕೆ. ಆದರೆ ರಾಸಾಯನಿಕ ವಿಷಯುಕ್ತ ನೀರು ಸೇರ್ಪಡೆಗೊಂಡು ಮಲಿನಗೊಳ್ಳುತ್ತಿದ್ದಾರೆ. ಅಕ್ಷರಶಃ ಘಟಪ್ರಭಾ ಒಡಲು ವಿಲವಿಲ ಎನ್ನುತ್ತಿದೆ...!!
ಇದು ಇಲ್ಲಿನ ಯಾದವಾಡ ರಸ್ತೆಯ ಸಿದ್ಧೇಶ್ವರ ಬ್ರೀಜ್-ಕಂ-ಬ್ಯಾರೇಜ್‌ನ ಘಟಪ್ರಭಾ ನದಿಯ ಪರಿಸ್ಥಿತಿ. ಜೀವನದಿ ಎನಿಸಿಕೊಂಡಿರುವ ಘಟಪ್ರಭೆ ಈಗ ರಾಸಾಯನಿಕ ಹೊಡೆತಕ್ಕೆ ಸಿಲುಕು ಒದ್ದಾಡುತ್ತಿದೆ. ಕಣ್ಣೆದುರು ಕಂಡರೂ ಅಧಿಕಾರಿಗಳ, ಜನಪ್ರತಿನಿಧಿಗಳ ನಿರವ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೋಗಗಳ ಭೀತಿ

ನದಿ ತಟದಲ್ಲಿ ಸದ್ಯ ಹರಿಯುವ ನದಿಗೆ ಬಿಳಿ ಬಣ್ಣದ ದಟ್ಟವಾದ ನೊರೆ ಬಂದು ಸೇರುವ ದೃಶ್ಯ ಆತಂಕ ಉಂಟುಮಾಡಿದೆ. ವಿಷಕಾರಿ ನೀರು ನೇರವಾಗಿ ನದಿ ಸೇರುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ನಗರ ಪ್ರದೇಶದ ಒಳ ಚರಂಡಿ ನೀರು, ಬಿಳಿ ಮಿಶ್ರಿತ ಕೆಮಿಕಲ್ ಸೇರ್ಪಡೆಗೊಂಡು ಆತಂಕ ಮೂಡಿಸಿದೆ. ಜಲಚರಗಳಿಗೂ ತೊಂದರೆಯಾಗುತ್ತಿದೆ. ಇದೇ ನೀರು ಬಳಸುವ ಸಾರ್ವಜನಿಕರಿಗೆ ಚರ್ಮವ್ಯಾಧಿ, ಕೆಮ್ಮು, ನೆಗಡಿ, ಜ್ವರ ಸೇರಿ ಹಲವು ರೋಗಗಳು ಹರಡುವ ಭೀತಿ ಎದುರಾಗಿದೆ.

ಕ್ಯಾರೆ ಎನ್ನದ ಆಯುಕ್ತರು

ಈ ಗಂಭೀರ ಸಮಸ್ಯೆಯ ಬಗ್ಗೆ ಸ್ಥಳೀಯ ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳು ಮುಧೋಳ ಆಯುಕ್ತರಿಗೆ ಹಲವು ಬಾರಿ ಲಿಖಿತ ಹಾಗೂ ಮೌಖಿಕ ದೂರು ನೀಡಿದ್ದಾರೆ. ಆದರೆ, ದೂರು ಸ್ವೀಕರಿಸಬೇಕಾದ ಆಯುಕ್ತರು ಮಾತ್ರ ’ನಮಗೂ ಇದಕ್ಕೂ ಸಂಬಂಧವಿಲ್ಲ’ ಎಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಜನಪ್ರತಿನಿಧಿಗಳಂತು ಈ ಬಗ್ಗೆ ಕಿಂಚಿತ್ತು ಕಾಳಜಿ ಇದ್ದಂತೆ ಕಾಣುತ್ತಿಲ್ಲ.
"

ನದಿ ಮಾಲಿನ್ಯದ ದೂರುಗಳು ಗಮನಕ್ಕೆ ಬಂದಿವೆ. ಒಳಚರಂಡಿ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಇಂಜಿನಿಯರ್‌ಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ತ್ಯಾಜ್ಯ ಸೇರುತ್ತಿದ್ದರೆ ಅದರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯುತ್ತೇವೆ. ಜೊತೆಗೆ 7 ಕೋಟಿ ರೂ. ವೆಚ್ಚದ ತ್ಯಾಜ್ಯ ನಿರ್ವಹಣಾ ಘಟಕ ಪ್ರಾರಂಭಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಗೋಪಾಲ ಖಾಸೆ ಆಯುಕ್ತರು ನಗರಸಭೆ ಮುಧೋಳ

"

ನಮ್ಮ ಹಿರಿಯರು ಇದೇ ನದಿ ನೀರು ಕುಡಿದು ಬೆಳೆದವರು. ಆದರೆ ಈಗ ನೀರು ಮುಟ್ಟಲು ಭಯವಾಗುತ್ತಿದೆ. ಅಧಿಕಾರಿಗಳಿಗೆ ಕೈ ಮುಗಿದು ಹೇಳಿ ಸಾಕಾಗಿದೆ. ನಮ್ಮ ಕಷ್ಟ ಯಾರು ಕೇಳುತ್ತಿಲ್ಲ. ಕೂಡಲೇ ಈ ರಾಸಾಯನಿಕ ನೀರು ನದಿಗೆ ಸೇರುವುದು ನಿಲ್ಲಿಸದೆ ಹೋದರೇ ನಗರಸಭೆ ಕಚೇರಿ ಎದುರು ಉಪವಾಸ ಸತ್ಯಾಗ್ರ ಮಾಡಲಾಗುವುದು.ರಮೇಶ ಪೂಜಾರಿ ಸ್ಥಳೀಯ ನಿವಾಸಿ

"

ಘಟಪ್ರಭಾ ನದಿಗೆ ವಿಷಯುಕ್ತ ನೀರು ಸೇರುತ್ತಿರುವುದರಿಂದ ತೊಂದರೆಯಾಗಿದೆ. ಜಲಚರಗಳು ಸಾಯುತ್ತಿವೆ. ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಿದ್ದರೂ ಶಾಸಕರು, ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗೆ ಮುಂದುವರಿದಲ್ಲಿ ಘಟಪ್ರಭೆ ನದಿ ಬದಲು ಬೃಹತ್ ಚರಂಡಿಯಾಗಿ ಮಾರ್ಪಡುವ ಕಾಲ ದೂರವಿಲ್ಲ. ಮುಂದಿನ ಪೀಳಿಗೆ ಜನರಿಗೆ ವಿಷ ಬಿಟ್ಟು ಹೋಗಬೇಕಾಗುತ್ತದೆ. ಆರ್.ಕೆ. ಹೂಗಾರ ಪರಿಸರ ಪ್ರೇಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net