ಬಾಗಲಕೋಟೆ ಉಪ ಚುನಾವಣೆಯ ಮತ ಎಣಿಕೆ ನಡೆಯಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ.
Published on:
Copied
Follow Us
ಬಾಗಲಕೋಟೆ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬಾಗಲಕೋಟೆ ಉಪ ಚುನಾವಣೆ ಮತ ಎಣಿಕೆ ಇಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಬೆಳಗ್ಗೆ 7 ಗಂಟೆಗೆ ಭದ್ರತಾ ಕೊಠಡಿ ತೆರೆಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ವಿಶ್ವವಿದ್ಯಾಲಯದ ನೆಲಮಹಡಿ ರೂಮ್ ನಂಬರ್ 4ರಲ್ಲಿ 18 ಟೇಬಲ್‌ಗಳಲ್ಲಿ 23 ಸುತ್ತುಗಳ ಮತ ಎಣಿಕೆ ನಡೆಯಲಿದೆ. ನೆಲಮಹಡಿ ಕೊಠಡಿ ಸಂಖ್ಯೆ 9ರಲ್ಲಿ ಒಂದು ಟೇಬಲ್‌ನಲ್ಲಿ ಅಂಚೆ ಮತಪತ್ರಗಳ ಎಣಿಕೆ ಹಾಗೂ ನೆಲಮಹಡಿ ರೂ.ನಂ. 9ರಲ್ಲೇ ಒಂದು ಟೇಬಲ್‌ನಲ್ಲಿ ಇಟಿಪಿಬಿಎಸ್ ಸ್ಕ್ಯಾನಿಂಗ್ ನಡೆಯುತ್ತದೆ.
ಮತ ಎಣಿಕೆ ಕಾರ್ಯಕ್ಕೆ ಈಗಾಗಲೇ ಜಿಲ್ಲಾಡಳಿತ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಿದ್ದು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ಎರಡು ಹಂತದ ತರಬೇತಿಯನ್ನು ನೀಡಿದೆ.
ಉಪ ಚುನಾವಣಾ ಕಣದಲ್ಲಿ ಒಟ್ಟು 9 ಅಭ್ಯರ್ಥಿಗಳು ಇದ್ದು, 1,78,273 ಮತ ಚಲಾವಣೆ ಆಗಿದ್ದು (ಅಂಚೆ ಮತಪತ್ರ, ಇಟಿಪಿ, ಮನೆಯಲ್ಲೆ ಮತದಾನ ಮಾಡಿದವರು ಹೊರತುಪಡಿಸಿ) ಅಭ್ಯರ್ಥಿಗಳ ಹಣೆಬರಹವನ್ನು ಈಗಾಗಲೇ ನಿರ್ಧರಿಸಿದ್ದು, ಇಂದು ಗೆಲುವು ಯಾರಿಗೆ ಎನ್ನುವುದು ಪ್ರಕಟಗೊಳ್ಳಲಿದೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತ್ತು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಡುವೆ ನೇರ ಹಣಾಹಣಿ ನಡೆದಿದ್ದ ಉಪ ಕದನಕ್ಕೆ ಏಪ್ರಿಲ್ 9ರಂದು ಮತದಾನ ನಡೆದಿತ್ತು. ಅಲ್ಲಿಂದ 24 ದಿನಗಳ ಅಂತರದ ಬಳಿಕ ಇಂದು ಮತ ಎಣಿಕೆ ನಡೆದು, ಎಲ್ಲರ ಕುತೂಹಲಕ್ಕೆ ತೆರೆ ಬೀಳಲಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ತೋಟಗಾರಿಕೆ ವಿವಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮುಂಜಾಗೃತ ಕ್ರಮವಾಗಿ ಮತ್ತು ಶಾಂತಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಲಂ 163 ಜಾರಿ ಮಾಡಿದ್ದು, ವಿಜಯೋತ್ಸವಕ್ಕೆ ಅವಕಾಶ ಕಲ್ಪಿಸಲಿಲ್ಲ. ಬಾಗಲಕೋಟೆ ಕ್ಷೇತ್ರ ಸೇರಿದಂತೆ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ.