ಸಂವಿಧಾನ ಸಮಾಜವಾದದ ತಾಯಿ

ಗುಳೇದಗುಡ್ಡ ತಾಲೂಕಿನ ಸಬ್ಬಲಹುಣಸಿ ಗ್ರಾಮದಲ್ಲಿ ಜರುಗಿದ ಪೌರತ್ವ ತರಬೇತಿ ಶಿಬಿರದ ಸಂವಿಧಾನದ ಆಶಯ ಕುರಿತು ಡಾ. ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿದರು. ಡಾ. ಎಚ್.ಎಸ್. ಘಂಟಿ, ಸಕ್ಕೂಬಾಯಿ ನೆಲ್ಲೂರ, ಇಂದುಮತಿ ಬೋರಣ್ಣವರ ಇತರರಿದ್ದರು.
ಗುಳೇದಗುಡ್ಡ ತಾಲೂಕಿನ ಸಬ್ಬಲಹುಣಸಿ ಗ್ರಾಮದಲ್ಲಿ ಜರುಗಿದ ಪೌರತ್ವ ತರಬೇತಿ ಶಿಬಿರದ ಸಂವಿಧಾನದ ಆಶಯ ಕುರಿತು ಡಾ. ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿದರು. ಡಾ. ಎಚ್.ಎಸ್. ಘಂಟಿ, ಸಕ್ಕೂಬಾಯಿ ನೆಲ್ಲೂರ, ಇಂದುಮತಿ ಬೋರಣ್ಣವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಸಣ್ಣವೀರಣ್ಣ ದೊಡ್ಡಮನಿ ಹೇಳಿಕೆ
  • ಪೌರತ್ವ ತರಬೇತಿ ಶಿಬಿರ
  • ಪ್ರಜಾಪ್ರಭುತ್ವದ ಶಕ್ತಿಯನ್ನು ಪೋಷಿಸಿ, ಪ್ರಜೆಗಳು ಒಗ್ಗಟ್ಟಾಗಿ ಸಾಮರಸ್ಯ ಸಾರಬೇಕು
ಗುಳೇದಗುಡ್ಡ: ಪ್ರಜಾಪ್ರಭುತ್ವದ ಶಕ್ತಿಯನ್ನು ಪೋಷಿಸಿ, ಪ್ರಜೆಗಳು ಒಗ್ಗಟ್ಟಾಗಿ ಸಾಮರಸ್ಯ ಸಾರಬೇಕು. ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳೇ ಪ್ರಜೆಯ ಜೀವಾಳ. ಹೀಗಾಗಿ ಸಂವಿಧಾನ ಸಮಾಜವಾದದ ತಾಯಿ ಎಂದು ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಹಾಗೂ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯದ ಆಶ್ರಯದಲ್ಲಿ ಇತ್ತೀಚೆಗೆ ತಾಲೂಕಿನ ಸಬ್ಬಲಹುಣಸಿ ಗ್ರಾಮದಲ್ಲಿ ಜರುಗಿದ 2025-26ನೇ ಸಾಲಿನ ಪೌರತ್ವ ತರಬೇತಿ ಶಿಬಿರದ ಸಂವಿಧಾನದ ಆಶಯ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ 16ಕ್ಕೂ ಹೆಚ್ಚು ಲೋಕಸಭಾ ಚುನಾವಣೆಗಳು ಜರುಗಿದ್ದು ಅದರಲ್ಲಿ ಗೆದ್ದು ಅಧಿಕಾರಕ್ಕೆ ಬಂದವರು ಬಂಡವಾಳಶಾಹಿಗಳು, ಹಣವಂತರು, ಮತಾಂಧರು, ದಿವಾಳಿಕೋರರು ಆಯ್ಕೆಯಾಗಿ ಪ್ರಜಾಪ್ರಭುತ್ವ ಹೆಸರು ಹೇಳಿ, ಪ್ರಜಾಶಕ್ತಿ ದಮನ ಮಾಡಿದ್ದಾರೆ. ವರ್ತಮಾನದಲ್ಲಿ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪೌರತ್ವ ತರಬೇತಿ ಅತ್ಯಗತ್ಯ. ಈ ಮೂಲಕ ಸಮಾಜದ ಮುಖವಾಣಿಯಾಗುವ ಪ್ರಶಿಕ್ಷಣಾರ್ಥಿಗಳಿಗೆ ಅರಿವು ನೀಡಿ, ಸಮಾಜವಾದ ಮತ್ತು ಪ್ರಜಾಪ್ರಭುತ್ವದ ತಾಯಿ ಎನಿಸಿದ ಸಂವಿಧಾನವನ್ನು ಸಂರಕ್ಷಿಸೋಣ ಎಂದರು.
ಪ್ರಾಚಾರ್ಯ ಡಾ. ಎಚ್.ಎಸ್. ಘಂಟಿ ಮಾತನಾಡಿ, ಸಂವಿಧಾನ ನಮಗೆ ವೈಯಕ್ತಿಕ ಮತ್ತು ಸಾರ್ವತ್ರಿಕ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ಸಾರ್ಥಕ್ಯ ನಮ್ಮ ಸೌಹಾರ್ದತೆಯಲ್ಲಿದೆ. ಬಾಬಾಸಾಹೇಬ್ ಅಂಬೇಡ್ಕರ್ ದಮನಿತರು, ಬಡವರು, ಸಾಮಾನ್ಯ ನಿರ್ಗತಿಕ ಪ್ರಜೆಯೂ ತನ್ನ ಮತ ಮೌಲ್ಯಗಳನ್ನು ಕಾಪಾಡಿಕೊಂಡು ದೇಶದಲ್ಲಿ ಗೌರವಯುತ ಬದುಕು ಸಾಗಿಸಬೇಕೆಂದು ತಮ್ಮ ಜೀವನದುದ್ದಕ್ಕೂ ದೇಶದ ಜನರ ಏಳ್ಗೆಗಾಗಿ ಬೆವರು ಸುರಿಸಿದ್ದಾರೆ. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪೌರತ್ವ ತರಬೇತಿ ಶಿಬಿರದ ಸಂಯೋಜಕಿ ಸಕ್ಕೂಬಾಯಿ ನೆಲ್ಲೂರ, ಉಪನ್ಯಾಸಕಿ ಇಂದುಮತಿ ಬೋರಣ್ಣವರ, ಪ್ರಶಿಕ್ಷಣಾರ್ಥಿ ಉಮಾಶ್ರೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net