ತಣ್ಣಗಾದ ಕಬ್ಬಿನ ಕಿಚ್ಚು ಶುರುವಾಯಿತು ಕಬ್ಬು ಕ್ರಷಿಂಗ್

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ನೇತೃತ್ವದಲ್ಲಿ ಶುಕ್ರವಾರ ಮುಧೋಳ ನಗರದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಮುಖಂಡರ ನಡುವಿನ ಮಾತುಕತೆ ಬಲಪ್ರದವಾದ ಹಿನ್ನೆಲೆಯಲ್ಲಿ ಸೈದಾಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಬಂದ ಕಬ್ಬು ತುಂಬಿದ ಟ್ರಾೃಕ್ಟರ್‌ಗಳ ಸಾಲು
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ನೇತೃತ್ವದಲ್ಲಿ ಶುಕ್ರವಾರ ಮುಧೋಳ ನಗರದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಮುಖಂಡರ ನಡುವಿನ ಮಾತುಕತೆ ಬಲಪ್ರದವಾದ ಹಿನ್ನೆಲೆಯಲ್ಲಿ ಸೈದಾಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಬಂದ ಕಬ್ಬು ತುಂಬಿದ ಟ್ರಾೃಕ್ಟರ್‌ಗಳ ಸಾಲು
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಕಂತು ಟನ್‌ಗೆ 3200 ರೂ. ಗೆ ಪಾವತಿ
  • ಕಾರ್ಖಾನೆ ಹಾಗೂ ಸರ್ಕಾರ ತಲಾ 50 ರೂ. ಕೊಡಬೇಕು
  • ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಧ್ಯಸ್ಥಿಕೆಯ ಸಂಧಾನ ಸಭೆ ಯಶಸ್ವಿ
ಬಾಗಲಕೋಟೆ: ಜಿಲ್ಲೆಯಲ್ಲಿ ಧಗಧಗಿಸಿ ಕಬ್ಬಿನ ಕಿಚ್ಚಿನ ಬಳಿಕ ಕೊನೆಗೂ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಮ್ಮುಖದಲ್ಲಿ ಮುಧೋಳ ನಗರದಲ್ಲಿ ನಡೆದ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಮುಖಂಡರ ಸಭೆ ಬಲಪ್ರದವಾಗಿದೆ. ಮಾತುಕತೆ ಯಶಸ್ವಿಯಾದ ಬೆನ್ನಲ್ಲೆ ಕಾರ್ಖಾನೆಗಳು ಕಬ್ಬು ಕ್ರಷಿಂಗ್ ಆರಂಭಿಸಲು ರೈತರು ಒಪ್ಪಿದ್ದಾರೆ.
ಸರ್ಕಾರದ ಆದೇಶದಂತೆ ರಿಕವರಿ ಆಧಾರಿತ ದರ ನಿಗದಿಯನ್ನು ಕೈಬಿಟ್ಟು ಎಲ್ಲ ಕಾರ್ಖಾನೆಗಳು ಟನ್ ಕಬ್ಬಿಗೆ ಮೊದಲ ಕಂತು 3,200 ರೂ. ಪಾವತಿಸಬೇಕು. ಎರಡನೇ ಕಂತಿನಲ್ಲಿ ಕಾರ್ಖಾನೆ ಹಾಗೂ ಸರ್ಕಾರ ತಲಾ 50 ರೂ. ಗಳಂತೆ 100 ರೂ. ಪಾವತಿಸಬೇಕು. ಒಟ್ಟಾರೆ, ಟನ್ ಕಬ್ಬಿಗೆ ಒಟ್ಟು 3,300 ರೂ. ಪಾವತಿಸಲು ಸಭೆಯಲ್ಲಿ ಎಲ್ಲ ಕಾರ್ಖಾನೆಗಳು ಒಪ್ಪಿಕೊಂಡವು. ಹಾಗೆಯೇ ರೈತ ಮುಖಂಡರು ಸಹ ಸಮ್ಮತಿ ಸೂಚಿಸಿದರು.
ಇದರ ಜೊತೆಗೆ ಎರಡು ವರ್ಷಗಳ ಹಿಂದಿನ ಎಚ್ ಆಂಡ್ ಟಿ (ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ) 114 ರೂ. ಎರಡ್ಮೂರು ದಿನಗಳಲ್ಲಿ ಎಲ್ಲ ಕಾರ್ಖಾನೆಗಳು ಪಾವತಿಸಬೇಕು ಎನ್ನುವ ಬೇಡಿಕೆಗೂ ಕಾರ್ಖಾನೆಗಳು ಒಪ್ಪಿದ್ದರಿಂದ ಜಿಲ್ಲೆಯ ಎಲ್ಲ 14 ಸಕ್ಕರೆ ಕಾರ್ಖಾನೆಗಳು ಆರಂಭಕ್ಕೆ ರೈತರು ಸೈ ಎಂದರು.
ಇದರಿಂದ ಗುರುವಾರ ಧಗಧಗಿಸಿದ್ದ ಕಬ್ಬಿನ ಕಿಚ್ಚು ಶುಕ್ರವಾರ ಸಚಿವರು, ಜಿಲ್ಲಾಡಳಿತದ ಸಂಧಾನ ಸಭೆಯ ಮೂಲಕ ಹೊತ್ತಿ ಉರಿಯುತ್ತಿದ್ದ ಬೆಂಕಿಯ ಕೆನ್ನಾಲಿಗೆ ತಣ್ಣಗಾಯಿತು.

ಗುರುವಾರ ಸಂಜೆ, ರಾತ್ರಿ ನಡೆದಿದ್ದೇನು...?

ಟನ್ ಕಬ್ಬಿಗೆ 3500 ರೂ. ಪಾವತಿಸಬೇಕು ಎಂದು ಮುಧೋಳ ನಗರದಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆದಿತ್ತು. ಇದು ದಿನೇ ದಿನೇ ಉಲ್ಬಣಗೊಳ್ಳುತ್ತಲೇ ಇತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದಿದ್ದರೂ ಯಾವುದೂ ಯಶಸ್ವಿ ಆಗಿರಲಿಲ್ಲ. ಗುರುವಾರ ಸಂಜೆ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಕಬ್ಬು ಕ್ರಷಿಂಗ್ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದ ರಬಕವಿ- ಬನಹಟ್ಟಿ ತಾಲೂಕಿನ ಸೈದಾಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಮುಧೋಳದಿಂದ ಸಾವಿರಾರು ರೈತರು ಮುತ್ತಿಗೆ ಹಾಕಲು ತೆರಳಿದ್ದರು. ಅಲ್ಲಿ ಅದೇನಾಯಿತೋ ಏನೋ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಕಬ್ಬಿನ ಟ್ರಾೃಕ್ಟರ್‌ಗಳಿಗೆ ಸಾಲು ಸಾಲಾಗಿ ಬೆಂಕಿ ಹಚ್ಚಿದರು. ಬೆಂಕಿ ಹಚ್ಚಿದ ಘಟನೆಗೂ ತಮಗೂ ಸಂಬಂಧ ಇಲ್ಲ ಎಂದು ರೈತ ಮುಖಂಡರು ಸ್ಪಷ್ಟನೆ ನೀಡಿದರು. ಯಾರೋ ದುಷ್ಕರ್ಮಿಗಳು ಮಾಡಿದ ಕೃತ್ಯ ಎನ್ನುವ ಮಾತುಗಳು ಕೇಳಿ ಬಂದವು. ಆದರೆ, ರೈತರ ಪ್ರತಿಭಟನೆ ವೇಳೆ ರೈತರ ಕಬ್ಬು ಹಾಗೂ ಟ್ರಾೃಕ್ಟರ್ ಗಳು ಧಗಧಗಿಸುವಂತೆ ಮಾಡಿ ಕಿಡಿಗೇಡಿಗಳು ಅಟ್ಟಹಾಸ ಮೆರೆದರು.
ಕಲ್ಲು ತೂರಾಟದಲ್ಲಿ ಎಎಸ್ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲು ಸಂಪೂರ್ಣ ಮುರಿದಿದ್ದು ಅವರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರಾತ್ರೋರಾತ್ರಿ ಕರೆದೊಯ್ಯಲಾಯಿತು. ಕೆಲವು ಪೊಲೀಸರು, ಟ್ರಾೃಕ್ಟರ್ ಚಾಲಕರು, ರೈತರಿಗೂ ಗಾಯಗಳಾಗಿದ್ದವು.
ನೂರಾರು ಕಬ್ಬಿನ ಟ್ರಾೃಕ್ಟರ್‌ಗಳಿಗೆ ಬೆಂಕಿ ಹತ್ತಿತ್ತು. ಬಳಿಕಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಘಟನೆಯಲ್ಲಿ ಒಟ್ಟು ನಾಲ್ಕು ಟ್ರಾೃಕ್ಟರ್ ಇಂಜಿನ್‌ಗಳು, ಮೂರ‌್ನಾಲ್ಕು ದ್ವಿಚಕ್ರವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. 20ಕ್ಕೂ ಹೆಚ್ಚು ಟ್ರಾೃಕ್ಟರ್‌ಗಳ ಟ್ರಾೃಲಿ, ಟೈಯರ್‌ಗಳು ಸೇರಿ ಹಾನಿ ಆಗಿದೆ. ಜೊತೆಗೆ ನೂರಕ್ಕೂ ಅಧಿಕ ಟ್ರಾೃಕ್ಟರ್‌ನಲ್ಲಿದ್ದ ಕಬ್ಬು ಕೆಲವೂ ಹೆಚ್ಚಿನ ಪ್ರಮಾಣ ಹಾಗೂ ಕೆಲವು ಅಲ್ಪಪ್ರಮಾಣದಲ್ಲಿ ಸುಟ್ಟಿರುವುದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಂಡು ಬಂದಿತು.

ಕಿಡಿಗೇಡಿಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ

ರೈತರು ಹಾಗೂ ಕಾರ್ಖಾನೆಯವರನ್ನು ಸೇರಿಸಿ ನಡೆಸಿದ ಸಂಧಾನ ಸಭೆ ಯಾಶಸ್ವಿಯಾಗಿದೆ. ಇದರಿಂದ ಸಂತಸವಾಗಿದೆ. ಇದೇ ವೇಳೆ ಗುರುವಾರ ನಡೆದ ಅಹಿತಕರ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅಹಿಂಸೆಗೆ ನಮ್ಮ ರೈತರು ಕಾರಣರಲ್ಲ ಎನ್ನುವುದು ನಮಗೆ ಗೊತ್ತಾಗಿದೆ. ಆದರೆ, ಇದೆಲ್ಲ ಮಾಡಿದ್ದಾೃರು? ಅವರನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸುತ್ತೇವೆ. ವರ್ಷಗಟ್ಟಲೇ ರೈತರು ಬೆವರು ಹರಿಸಿ, ನೀರು, ಗೊಬ್ಬರ ಹಾಕಿ ಬೆಳೆಸಿದ ಕಬ್ಬಿಗೆ ಬೆಂಕಿ ಹಚ್ಚುತ್ತಾರೆ ಎಂದರೆ ಅವರನ್ನು ಕ್ಷಮಿಸಲು ಆಗುತ್ತಾ? ರಕ್ಷಣೆ ಕೊಡುವ ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದ್ದಾರೆ. ಎಎಸ್ಪಿ ಅವರ ಕಾಲು ಮುರಿದಿದೆ. ಇದಕ್ಕೆ ಕಾರಣರಾದವರು ಯಾರೇ ಇದ್ದರೂ ಅವರು ಕ್ಷಮೆಗೆ ಅರ್ಹರಲ್ಲ. ಅವರನ್ನು ಕ್ಷಮಿಸುವ ಮಾತು ಇಲ್ಲಿ ಬರಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.

ಹಾನಿಯ ಬಗ್ಗೆ ಜಿಲ್ಲಾಧಿಕಾರಿ ವರದಿ ಕೊಡಲಿದ್ದಾರೆ

ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ಹಾನಿಗೆ ಒಳಗಾದ ಟ್ರಾೃಕ್ಟರ್, ಬೈಕ್, ಕಬ್ಬು ವೀಕ್ಷಿಸಿದರು. ನಿಖರವಾಗಿ ಹಾನಿಯ ಪ್ರಮಾಣ ಎಷ್ಟು ಎಂದು ವರದಿ ನೀಡಲು ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಸೂಚಿಸಿದ್ದಾರೆ. ಜೊತೆಗೆ ಗುರುವಾರ ನಡೆದ ಅಹಿತಕರ ಘಟನೆಯಲ್ಲಿ ಸಂಭವಿಸಿದ ಹಾನಿಗೆ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಾಧ್ಯ ಇರುವ ಪರಿಹಾರ ಕೊಡಿಸಲಾಗುವುದು. ಹಾಗೆಯೇ ದುಷ್ಕೃತ್ಯದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದರು.
ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕು ಎನ್ನುವ ತೀರ್ಮಾನ ಆಗಿಲ್ಲ. ಸಾಧ್ಯವಾದಷ್ಟು ಪರಿಹಾರ ನೀಡಲಾಗುವುದು. ಈ ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಇರಲಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net