ಕೇಂದ್ರದ ಎಫ್​ಆರ್​ಪಿ ದರ ರೈತ ವಿರೋಧಿ

 ಸುಭಾಸ ಶಿರಬೂರ
ಸುಭಾಸ ಶಿರಬೂರ
Published on

ಪ್ರಮುಖ ಮುಖ್ಯಾಂಶಗಳು

  • ಸುಭಾಸ ಶಿರಬೂರ ಆಕ್ರೋಶ
  • ರೈತರಿಗೆ ಅನ್ಯಾಯವಾಗುತ್ತಿದೆ
  • ಟನ್ ಕಬ್ಬಿಗೆ ಕೇಂದ್ರ ಸರ್ಕಾರ 3,650 ರೂ. ನಿಗದಿಪಡಿಸಿದೆ
ಮುಧೋಳ: ಕೇಂದ್ರ ಸರ್ಕಾರ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಘೋಷಿಸಿರುವ ಎಫ್​ಆರ್​ಪಿ ದರವು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡ ಸುಭಾಸ ಶಿರಬೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 10.25ರಷ್ಟು ಸಕ್ಕರೆ ಇಳುವರಿ ಇರುವ ಒಂದು ಟನ್ ಕಬ್ಬಿಗೆ ಕೇಂದ್ರ ಸರ್ಕಾರ 3,650 ರೂ. ನಿಗದಿಪಡಿಸಿದೆ. ಆದರೆ, ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ ಪ್ರತಿ ಟನ್ ಕಬ್ಬು ಬೆಳೆಯಲು 2577 ರೂ. ಉತ್ಪಾದನಾ ವೆಚ್ಚವಾಗುತ್ತಿದೆ. ಇಷ್ಟು ಹೆಚ್ಚಿನ ಖರ್ಚು ಇರಬೇಕಾದರೆ ಕೇಂದ್ರದ ಈ ದರ ನಿಗದಿ ಬೆಳೆಗಾರರ ಹಿತ ಕಾಯುವಲ್ಲಿ ಸೋತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಾರ್ಖಾನೆಗಳ ಕಡಿತ ಮತ್ತು ಸಾರಿಗೆ ವೆಚ್ಚದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಶಿರಬೂರ ಅವರು, ಕಾರ್ಖಾನೆಗಳು ಪ್ರತಿ ಟನ್‌ಗೆ 950 ರಿಂದ 1,025 ರೂಪಾಯಿಗಳವರೆಗೆ ಕಡಿತ ಮಾಡುತ್ತಿವೆ ಎಂದು ದೂರಿದ್ದಾರೆ. ಇದರ ಜತೆಗೆ ಕಟಾವು ಕಾರ್ಮಿಕರು ಮತ್ತು ವಾಹನ ಚಾಲಕರು ಹೆಚ್ಚುವರಿ ಹಣದ ಬೇಡಿಕೆ ಇಡುತ್ತಿದ್ದು, ಎಲ್ಲವೂ ಸೇರಿ ರೈತನಿಗೆ ಒಂದು ಟನ್‌ಗೆ 1,300 ರೂ. ಹೊರೆಯಾಗುತ್ತಿದೆ. ಅಂತಿಮವಾಗಿ 3,650 ರೂ. ಎ್ಆರ್‌ಪಿ ದರದಲ್ಲಿ ಇಷ್ಟೆಲ್ಲಾ ಕಡಿತವಾದರೆ ರೈತನ ಕೈಗೆ ಉಳಿಯುವುದು ಕೇವಲ 2,350 ರೂ. ಮಾತ್ರ. ಈ ದರವು ಬೆಳೆಗಾರರ ಕಷ್ಟಕ್ಕೆ ತಕ್ಕ ಪ್ರತಿಲವಲ್ಲದ ಕಾರಣ, ಸರ್ಕಾರ ಇದನ್ನು ಕೂಡಲೇ ರದ್ದುಗೊಳಿಸಿ 9.5 ಇಳುವರಿ ಇರುವ ಕಬ್ಬಿಗೆ ಕನಿಷ್ಠ 5,000 ರೂ. ನಿಗದಿಪಡಿಸಬೇಕು ಎಂದು ಸುಭಾಸ ಶಿರಬೂರ ಅವರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net