ಕೂಲಿ ಕಾರ್ಮಿಕರ ಹಕ್ಕು ಕಿತ್ತುಕೊಳ್ಳಲು ಕೇಂದ್ರದ ಹುನ್ನಾರ

 ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಗ್ರಾಕೂಸ್ ಜಿಲ್ಲಾ ಸಂಯೋಜಕ ಶಂಕರ ಹೂಗಾರ ಮಾತನಾಡಿದರು. ಮಹಾಂತೇಶ ಹೊಸಮನಿ, ಸವಿತಾ ತೆಗ್ಗಿ, ಶಿಲ್ಪಾ ಗೂಡಣ್ಣವರ ಮತ್ತಿತರರು ಇದ್ದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಗ್ರಾಕೂಸ್ ಜಿಲ್ಲಾ ಸಂಯೋಜಕ ಶಂಕರ ಹೂಗಾರ ಮಾತನಾಡಿದರು. ಮಹಾಂತೇಶ ಹೊಸಮನಿ, ಸವಿತಾ ತೆಗ್ಗಿ, ಶಿಲ್ಪಾ ಗೂಡಣ್ಣವರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ ಗ್ರಾಕೂಸ್ ತೀವ್ರ ಆಕ್ರೋಶ
  • ಜಿ ರಾಮ್ ಜಿ ಮಸೂದೆ ತಿರಸ್ಕರಿಸಲು ಆಗ್ರಹ
  • ಕೂಲಿ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ
ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಪರ್ಯಾಯವಾಗಿ ಕೇಂದ್ರದ ಬಿಜೆಪಿ ಸರ್ಕಾರ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆಯ ಹೆಸರಿನಲ್ಲಿ ಕೇಂದ್ರ ಸರ್ಕಾರ ದೇಶದ ಕೂಲಿ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಬಾಗಲಕೋಟೆ ಜಿಲ್ಲಾ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಕೂಸ್ ಜಿಲ್ಲಾ ಸಂಯೋಜಕ ಶಂಕರ ಹೂಗಾರ, ನರೇಗಾ ಹೆಸರು ಬದಲಾವಣೆ ಮಾಡಿರುವ ಬಗ್ಗೆ ನಮ್ಮ ಆಕ್ಷೇಪಣೆ ಏನು ಇಲ್ಲ. ಆದರೆ, ಇದರ ಜೊತೆಗೆ ಯೋಜನೆಯ ಕಾನೂನು ಬದಲಾವಣೆ ಮಾಡುತ್ತಿರುವುದು ಕೂಲಿ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಈ ಹುನ್ನಾರವನ್ನು ಖಂಡಿಸಿ, ಮಸೂದೆ ಕೈಬಿಡುವಂತೆ ಆಗ್ರಹಿಸಿ ಶೀಘ್ರದಲ್ಲೇ ಸಂಸದರ ಮನೆ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ನರೇಗಾ ಯೋಜನೆ ಹೆಸರು ಬದಲಾವಣೆ ಜೊತೆಗೆ ಸರ್ಕಾರ ಮೊದಲಿದ್ದ ನಿಯಮಗಳನ್ನು ಬದಲಾಯಿಸುವ ಮೂಲಕ ಕೂಲಿ ಕಾರ್ಮಿಕರಿಗೆ ಇದ್ದ ಆಯ್ಕೆಯ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಜನಪರವಾಗಿ ಮೊದಲಿದ್ದ ಕಾನೂನು ಬದಲಾಯಿಸಿ ಯಾವುದೇ ಕಾರ್ಮಿಕರ ಜೊತೆಗೆ ಚರ್ಚೆ ಇಲ್ಲದೇ ಬದಲಾವಣೆ ಮಾಡುವ ಮೂಲಕ ಜನ ವಿರೋಧಿ ನೀತಿ ಜಾರಿಮಾಡುತ್ತಿದೆ. ಇದು ಕಾರ್ಮಿಕರಿಗೆ ಮಾಡುತ್ತಿರುವ ಭಾರಿ ಪ್ರಮಾಣದ ಅನ್ಯಾಯ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಮೊದಲು ನರೇಗಾದಲ್ಲಿ ಕೂಲಿ ಕಾರ್ಮಿಕರು ಬಯಸಿದಾಗ ಅವರು ಕೇಳಿದ ಜಾಗದಲ್ಲಿ ಕೂಲಿ ಕೆಲಸ ಕೊಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ಅದನ್ನು ಬದಲಾವಣೆ ಮಾಡಿ, ಕೇಂದ್ರ ನಿಗದಿಪಡಿಸಿದ ಸಮಯ ಮತ್ತು ಸ್ಥಳಕ್ಕೆ ಕಾರ್ಮಿಕರು ಕೆಲಸಕ್ಕೆ ಹೋಗಬೇಕು ಎಂದುಮಾಡಿದೆ. 125 ಕೂಲಿ ದಿನಗಳನ್ನು ಮಾಡಿದ್ದೇವೆ ಎನ್ನುವುದು ಕೇಂದ್ರ ಸರ್ಕಾರ ಕಾರ್ಮಿಕರ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ. ವಾಸ್ತವದಲ್ಲಿ ಈಗ 100 ದಿನಗಳಲ್ಲಿ 60 ದಿನ ಸಹ ಕೆಲಸ ಸಿಗುತ್ತಿಲ್ಲ. ಇನ್ನು 125 ದಿನಗಳನ್ನು ಕೊಡುತ್ತೇವೆ ಎನ್ನುವುದು ಬರೀ ಹುಸಿ ಭರವಸೆ ಎಂದರು.
ಈ ಮೊದಲು ನರೇಗಾ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶೇ. 90ರಷ್ಟು ಅನುದಾನವನ್ನು ಕೇಂದ್ರ ಹಾಗೂ ಶೇ. 10ರಷ್ಟನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು. ಈಗ ಬದಲಾವಣೆ ಮಾಡಿರುವಂತೆ ಕೇಂದ್ರ ಶೇ. 60ರಷ್ಟು ಮತ್ತು ರಾಜ್ಯ ಶೇ. 40ರಷ್ಟು ಅನುದಾನ ಕೊಡಬೇಕು ಎಂದಿದೆ. ಇದು ಸಾಧ್ಯವಾಗದ ಮಾತು. ರಾಜ್ಯ ಸರ್ಕಾರ ಶೇ. 40ರಷ್ಟು ಅನುದಾನ ಒದಗಿಸಲು ಸಾಧ್ಯವಾಗದೇ ಯೋಜನೆಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ದೇಶದ ಬಡ ಕೂಲಿ ಕಾರ್ಮಿಕರಿಗೆ ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಂತೇಶ ಹೊಸಮನಿ, ಬಸವರಾಜ ದೊಡಮನಿ, ರೇಣುಕಾ ಸುನಗದ, ಸವಿತಾ ತೆಗ್ಗಿ, ಶಿಲ್ಪಾ ಗೂಡಣ್ಣವರ, ಸಕ್ಕುಬಾಯಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೂ ಸಹ ತನ್ನ ಕೊನೆ ಆಸೆ ಏನು? ಎಂದು ಕೇಳಲಾಗುತ್ತಿದೆ. ಆದರೆ, ಇಡೀ ದೇಶದ ಬಡ ಕೂಲಿ ಕಾರ್ಮಿಕರ ಜೀವನಕ್ಕೆ ಆಧಾರ ಸ್ಥಂಭವಾಗಿದ್ದ ನರೇಗಾ ಯೋಜನೆ ಹೆಸರು ಮತ್ತು ಕಾನೂನು ಬದಲಾಯಿಸುವಾಗಿ ಕನಿಷ್ಠ ಪಕ್ಷ ಕಾರ್ಮಿಕರ ಅಭಿಪ್ರಾಯ ಏನು? ಎಂದು ಕೇಳದೆ ಕೇಂದ್ರ ಸರ್ಕಾರ ಕಾರ್ಮಿಕರನ್ನು ಗಲ್ಲುಶಿಕ್ಷೆಗೆ ಗುರಿಯಾದ ಅಪರಾಧಿಗಳಿಗಿಂತಲೂ ಕಡೆಯಾಗಿ ಕಂಡಿದೆ.

ಮಹಾಂತೇಶ ಹೊಸಮನಿ, ಗ್ರಾಕೂಸ್ ಮುಖಂಡರು, ಬಾಗಲಕೋಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net