ಹುಟ್ಟುವ ಮಕ್ಕಳ ಮೇಲೂ ಸಾಲದ ಭಾರ..!

ಬಾಗಲಕೋಟೆಯಲ್ಲಿ ಭಾನುವಾರ ಮಾಜಿ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಅಶೋಕ ಲಿಂಬಾವಳಿ ಮತ್ತಿತರರು ಇದ್ದರು.
ಬಾಗಲಕೋಟೆಯಲ್ಲಿ ಭಾನುವಾರ ಮಾಜಿ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಅಶೋಕ ಲಿಂಬಾವಳಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆಗೈದ ಶ್ರೀರಾಮುಲು
  • ಯಾವ ಸಾಧನೆಗೆ ಜನರ ಮತ ಕೇಳುತ್ತೀರಾ?
  • ನನ್ನ ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಪ್ರಚಾರಕ್ಕೆ ತೆರಳಿ ಎಂದು ಭಿನ್ನಹ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಗೆ ಇಂದು ಮತ್ತು ನಾಳೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಅಖಾಡಕ್ಕೆ ಇಳಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಬಿ. ಶ್ರೀರಾಮುಲು ಹಲವು ಪ್ರಶ್ನೆಗಳಿಗೆ ಉತ್ತರಿಸಿ ಪ್ರಚಾರಕ್ಕೆ ತೆರಳಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಅವರೇ ಯಾವ ಸಾಧನೆಗಾಗಿ ಜನರ ಬಳಿ ನೀವು ಮತ ಕೇಳುತ್ತೀರಿ? ಈ ರಾಜ್ಯದಲ್ಲಿ ಎಲ್ಲ ಮುಖ್ಯಮಂತ್ರಿಗಳಿಂದ ಅಧಿಕ ಸಾಲ ಮಾಡಿದ ಸಿಎಂ ನಾನು ಎಂದು ಹೇಳಿಕೊಂಡು ಕೇಳುತ್ತೀರಾ? ಈ ರಾಜ್ಯದಲ್ಲಿ ಮುಂದೆ ಹುಟ್ಟಲಿರುವ ಮಕ್ಕಳ ತಲೆ ಮೇಲೂ 1.5 ಲಕ್ಷ ರೂ. ಸಾಲದ ಹೊರೆ ಮಾಡಿಟ್ಟಿದ್ದೇನೆ ಎಂದು ಧೈರ್ಯದಿಂದ ಹೇಳಿಕೊಂಡು ಮತಯಾಚನೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು.
ಈ ಹಿಂದೆ ಸಾಕಷ್ಟು ಮುಖ್ಯಮಂತ್ರಿಗಳು ಸಾಲ ಮಾಡಿದ್ದರು. ಅವರಿಗಿಂತ ಜಾಸ್ತಿಮಾಡಿ, ವಾರ್ಷಿಕ 89 ಸಾವಿರ ಕೋಟಿ ರೂ. ಬಡ್ಡಿ ಕಟ್ಟುತ್ತೇನೆ. ಜನರ ಮೆಚ್ಚುಗೆ ಗಳಿಸಿ ಐದು ವರ್ಷ ಸಿಎಂ ಆಗದೇ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಿ ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ಕೋರುತ್ತಿದ್ದೇನೆ. ತಮ್ಮ ಹಾಗೂ ಡಿಕೆಶಿ ಕುರ್ಚಿ ಕಾಳಗದ ಬಗ್ಗೆ ಹೇಳಿಕೊಂಡು ಮತಯಾಚನೆ ಮಾಡುತ್ತೀರಾ?
ಈ ಉಪ ಚುನಾವಣೆ ಪ್ರಚಾರಕ್ಕೆ ಬರಲು ನಿಮ್ಮ ಪಕ್ಷದ ಅಜೆಂಡ ಏನಿದೆ? ರಾಜ್ಯದಲ್ಲಿ ರಸ್ತೆಗಳು ಹಾಳಾಗಿವೆ. ಮೂಲ ಸೌಲಭ್ಯ ಕಲ್ಪಿಸಲು ನಮ್ಮ ಬಳಿ ಅನುದಾನ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಎಲ್ಲ ದಿನಸಿ ಬೆಲೆ ಏರಿಕೆ ಮಾಡಿದ್ದೇವೆ. ವಾಲ್ಮೀಕಿ ನಿಗಮದ ಹಣ ಭ್ರಷ್ಟಾಚಾರ ಮಾಡಿದ್ದನ್ನು ವಾಪಸ್ಸು ಕಟ್ಟಿಸುತ್ತೇನೆ ಎಂದು ಹೇಳಿದ್ದು, ಈ ವರೆಗೂ ಕಟ್ಟಿಸಿಲ್ಲ. 139 ಜನರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಅವರೆಲ್ಲರೂ ಅಂಧಾ ದರ್ಬಾರ್ ಮಾಡಲು ಬಿಟ್ಟಿದ್ದೇನೆ ಎಂದು ಹೇಳಿಕೊಂಡು ಮತ ಕೇಳುತ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಕಾಶಪ್ಪನವರ ಐಪಿಎಲ್ ಟಿಕೆಟ್ ಬೇಡಿಕೆಗೆ ವ್ಯಂಗ್ಯ

ಬಾಗಲಕೋಟೆ: ಕಾಂಗ್ರೆಸ್ ಶಾಸಕರು ಹೇಗಾಗಿದ್ದಾರೆ ನೋಡಿ. ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕೋ ಅಥವಾ ತಮ್ಮ ಕುಟುಂಬದವರ ಖುಷಿಗಾಗಿ ಕೇಳಬೇಕೋ? ಎಂದು ಶ್ರೀರಾಮುಲು ಪ್ರಶ್ನಿಸಿದರು.
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದನ್ನು ಬಿಟ್ಟು ಶಾಸಕ ವಿಜಯಾನಂದ ಕಾಶಪ್ಪನವರ ಐಪಿಎಲ್ ವೀಕ್ಷಿಸಲು ಟಿಕೆಟ್ ಕೇಳಿದ್ದಾರೆ. ಶಾಸಕರಿಗೆ ಐದು ಟಿಕೆಟ್ ಕೊಡಬೇಕು. ತಮಗಾಗಿ ಪ್ರತ್ಯೇಕ ವಿಐಪಿ ಗ್ಯಾಲರಿ ಇರಬೇಕು ಎಂದಿದ್ದಾರೆ. ಪುಣ್ಯಾತ್ಮ ಆ ಗ್ಯಾಲರಿಗೆ ತನ್ನದೇ ಹೆಸರಿಡಬೇಕು ಎಂದು ಕೇಳಿಲ್ಲ ಎಂದು ವ್ಯಂಗ್ಯವಾಡಿದರು.
ಶಾಸಕರು ಟಿಕೆಟ್ ಕೇಳಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ, ನಾವು ವಿಐಪಿ ಜನ ಸಾಮಾನ್ಯರ ಜೊತೆ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡಲು ಆಗಲ್ಲ. ತಮಗಾಗಿ ಪ್ರತ್ಯೇಕ ಗ್ಯಾಲರಿ ಬೇಕು ಎಂದರೆ ಹೇಗೆ? ಶಾಸಕರು ಎಂದರೆ ದೇವ ಮಾನವರಾ? ಎಂದು ಕಿಡಿಕಾರಿದರು.

ಸಿಎಂ ಐದು ದಿನ ಯಾಕೆ?

ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅನುಮಾನ ಎಂದು ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕ್ಷೇತ್ರ ಉಳಿಸಿಕೊಳ್ಳಲು ಹಿಂದೆ ಬಾದಾಮಿಯಲ್ಲಿ ಹಣ ಚೆಲ್ಲಿದಂತೆ ಇಲ್ಲಿಯೂ ಹಣ ಬಲ, ತೋಳ್ಬಲದಿಂದ ಗೆಲ್ಲಲು ಐದು ದಿನ ಪ್ರಚಾರಕ್ಕೆ ಬರುತ್ತಿದ್ದಾರೆ. ಈ ವೇಳೆ ರಾಜ್ಯದಲ್ಲಿ ಇರುವ ಎಲ್ಲ ನಿಗಮಗಳ ಅಽಕಾರಿಗಳು ತಮ್ಮ ಅನುದಾನ ಏನಾಗಿದೆ ಎಂದು ಚೆಕ್ ಮಾಡಿಕೊಳ್ಳಬೇಕು. ಹಿಂದೆ ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದು ಚುನಾವಣೆಗೆ ಬಳಕೆ ಮಾಡಿದಂತೆ ಈಗ ಉಪ ಚುನಾವಣೆಗೆ ಯಾವ ನಿಗಮದ ಹಣ ತರುತ್ತಾರೋ ಎಂದು ಶಂಕೆ ವ್ಯಕ್ತಪಡಿಸಿದರು.
ಆದರೆ, ಬಾಗಲಕೋಟೆಯಲ್ಲಿ ನಿಮ್ಮ ಸರ್ಕಾರದ ಯಾವ ಬಲವೂ ನಡೆಯಲ್ಲ. ಜನರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಲು ನಿರ್ಧಾರ ಮಾಡಿಯಾಗಿದೆ. ಚರಂತಿಮಠ ಅವರು ಬಾಗಲಕೋಟೆ ಅಭಿವೃದ್ಧಿ ಪಡಿಸಿದ್ದಾರೆ. ಮೂರು ವರ್ಷ ಅವು ನಿಂತಿವೆ. ಹೀಗಾಗಿ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net