ಬಾಗಲಕೋಟೆಯ ಬಿಟಿಡಿಎ ಆವರಣದಲ್ಲಿ ಇರುವ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂಬರ 16 ರಲ್ಲಿ ಶುಕ್ರವಾರ ಜರುಗಿದ ಮಕ್ಕಳ ದಿನೋತ್ಸವ ಸಂಭ್ರಮದಲ್ಲಿ ಮಕ್ಕಳು ಕರ್ನಾಟಕದ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಪ್ರದರ್ಶಿಸಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಲೆಯ ಸಿಬ್ಬಂದಿ ಇದ್ದರು.
ಬಾಗಲಕೋಟೆ: ಸರ್ಕಾರಿ ಶಾಲೆಗಳ ಮಕ್ಕಳಿಗೆ ರಾಷ್ಟ್ರದ ಇತಿಹಾಸ ಹಾಗೂ ರಾಷ್ಟ್ರೀಯತೆ ಬಗ್ಗೆ ಪಾಠ ಬೋಧಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಯಲ್ಲ ಎಂದು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹೇಳಿದರು.
ವಿದ್ಯಾಗಿರಿಯ ಬಿಟಿಡಿಎ ಆವರಣದಲ್ಲಿರುವ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂಬರ್ 16ರಲ್ಲಿ ಶುಕ್ರವಾರ ಜರುಗಿದ ಮಕ್ಕಳ ದಿನೋತ್ಸವ ಸಂಭ್ರಮದಲ್ಲಿ ಪೋಷಕರ, ಶಿಕ್ಷಕರ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೆಲದಿನಗಳ ಹಿಂದೆ ವೈದ್ಯ ಕಾಲೇಜಿನ ವಿದ್ಯಾರ್ಥಿಗಳು ದೇಶ ವಿರೋಧಿ ಕೃತ್ಯ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗವಹಿಸಿ ಮುಗ್ಧ ಜನರ ಪ್ರಾಣ ತೆಗೆದ ಕೃತ್ಯ ಖಂಡನಾರ್ಹ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರದ ಇತಿಹಾಸದ ಜೊತೆಗೆ ರಾಷ್ಟ್ರೀಯತೆ, ಸಂಸ್ಕಾರ, ಪದ್ಧತಿ, ರೀತಿ ರಿವಾಜುಗಳನ್ನು ತಿಳಿಸುವ ಕೆಲಸ ಮಾಡಬೇಕು. ಪಾಲಕರು ಖಾಸಗಿ ಶಾಲೆಗಳಿಗೆ ಮಾರು ಹೋಗದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಅತ್ಯುನ್ನತ ಸ್ಥಾನಗಳಲ್ಲಿ ಜನ ಸೇವೆ ಮಾಡುತ್ತಿದ್ದಾರೆಂದು ಹೇಳಿದರು.
ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಹುಟ್ಟು ಹಬ್ಬವನ್ನು ದೇಶದಲ್ಲಿ ಮಕ್ಕಳ ದಿನಾಚರಣೆಯನ್ನಾಗಿ ಮಾಡುತ್ತಿದ್ದಾರೆ. ಮಕ್ಕಳು ದೇಶದ ಮುಂದಿನ ಭವಿಷ್ಯ. ಮಕ್ಕಳ ಚಲನವನದ ಬಗ್ಗೆ ಶಿಕ್ಷಕರ ಜೊತೆಗೆ ಪಾಲಕರು ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಇಂದಿನ ಮಕ್ಕಳ ನಾಳಿನ ಭವಿಷ್ಯವಾಗಿದ್ದು ಅವರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಮಕ್ಕಳ ರಕ್ಷಣೆಯಲ್ಲಿ ಸಮಾಜದ ಜವಾಬ್ದಾರಿ ಇದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ಸವಿತಾ ಲೆಂಕನ್ನವರ್, ಈರಣ್ಣ ಶಿರಗನ್ನವರ, ಬಿಇಒ ಎಸ್.ಎಸ್. ಬಡದಾನಿ, ಎಸ್‌ಡಿಎಂಸಿ ಅಧ್ಯಕ್ಷ ರುದ್ರಯ್ಯ ಗಣಕುಮಾರಮಠ, ಮುಖ್ಯಗುರು ಜಿ.ಎಸ್. ಖೋತ್, ಎಸ್.ಎಸ್. ಹಾಲವರ, ಶರಣಪ್ಪ ಬೇವೂರ, ಎನ್.ಎಸ್. ಲೋಕಾಪೂರ ಮತ್ತಿತರರು ಇದ್ದರು.