ಪಲ್ಸ್ ಪೋಲಿಯೋಗೆ ತಾಲೂಕು ಸಜ್ಜು

 ಹುನಗುಂದದಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನದ ಭಿತ್ತಿಪತ್ರವನ್ನು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಬಿಡುಗಡೆಗೊಳಿಸಿದರು. ಸಿಡಿಪಿಒ ಮುತ್ತಣ್ಣ ಎ.ಸಿ. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಂಟೂರ ಉಪಸ್ಥಿತರಿದ್ದರು.
ಹುನಗುಂದದಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನದ ಭಿತ್ತಿಪತ್ರವನ್ನು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಬಿಡುಗಡೆಗೊಳಿಸಿದರು. ಸಿಡಿಪಿಒ ಮುತ್ತಣ್ಣ ಎ.ಸಿ. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಂಟೂರ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಸೂಚನೆ
  • 35 ಸಾವಿರಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಗುರಿ
  • ಜೂ. 28ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ
ಹುನಗುಂದ : ಜೂ. 28ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಶೇ. 95ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಈ ಬಾರಿ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೂರಕ್ಕೆ ನೂರು ಗುರಿ ಸಾಧಿಸಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಚ್. ಅಂಗಡಿ ಮಾಹಿತಿ ನೀಡಿ, ಹುನಗುಂದ- ಇಳಕಲ್ಲ ವ್ಯಾಪ್ತಿಯಲ್ಲಿ ಐದು ವರ್ಷದೊಳಗಿನ 35,078 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು. ಇದಕ್ಕಾಗಿ 259 ಸ್ಥಿರ ಕೇಂದ್ರಗಳೊಂದಿಗೆ 11 ಸಂಚಾರಿ ಹಾಗೂ 12 ಮೊಬೈಲ್ ತಂಡಗಳನ್ನು ಸೇರಿಸಿ ಒಟ್ಟು 282 ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜೂ. 28ರಿಂದ ಜುಲೈ 1ರವರೆಗೆ ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಆರೋಗ್ಯ ನಿರೀಕ್ಷಕ ಜಿ.ಬಿ. ಭದ್ರಣ್ಣವರ ಮಾತನಾಡಿ, ಬಸ್ ನಿಲ್ದಾಣ, ಅಂಗನವಾಡಿ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಪೋಲಿಯೋ ಬೂತ್‌ಗಳನ್ನು ತೆರೆಯಲಾಗುವುದು. ಪಾಲಕರು ತಮ್ಮ ಮಕ್ಕಳಿಗೆ ತಪ್ಪದೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಅಭಿಯಾನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಸಿಡಿಪಿಒ ಮುತ್ತಣ್ಣ ಎ.ಸಿ., ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಾಂಟೂರ, ಡಿಪೋ ವ್ಯವಸ್ಥಾಪಕ ಅರವಿಂದ ಭಜಂತ್ರಿ, ಮುಖ್ಯ ವೈದ್ಯಾಧಿಕಾರಿ ಮಂಜುನಾಥ ಅಂಕೋಲಕರ, ಸಂಗಮೇಶ ಹೊದ್ಲೂರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net