ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಿ

ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಾಹಣಾ ಪ್ರಾಧಿಕಾರದ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು. ಎಡಿಸಿ ಅಶೋಕ ತೇಲಿ, ಎಸಿ ಸಂತೋಷ ಜಗಲಾಸರ, ಪುರಾತತ್ವ ಅಧೀಕ್ಷಕ ರಮೇಶ ಮೂಲಿಮನಿ ಮತ್ತಿತರರಿದ್ದರು.
ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಾಹಣಾ ಪ್ರಾಧಿಕಾರದ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು. ಎಡಿಸಿ ಅಶೋಕ ತೇಲಿ, ಎಸಿ ಸಂತೋಷ ಜಗಲಾಸರ, ಪುರಾತತ್ವ ಅಧೀಕ್ಷಕ ರಮೇಶ ಮೂಲಿಮನಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ
  • ನಿರ್ವಹಣಾ ಪ್ರಾಧಿಕಾರದ ಮಾಸಿಕ ಸಭೆ
  • ಸ್ಮಾರಕಗಳ ಸಂರಕ್ಷಣೆಗೆ ಕ್ರಮ
ಬಾಗಲಕೋಟೆ: ಜಿಲ್ಲೆಯ ಬಾದಾಮಿ, ಐಹೊಳೆಯಲ್ಲಿರುವ ಪಾರಂಪರಿಕ ಸ್ಮಾರಕಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಾಹಣಾ ಪ್ರಾಧಿಕಾರದ ಆಯುಕ್ತರು ಹಾಗೂ ಬಾಗಲಕೋಟೆ ಉಪ ವಿಭಾಗಾಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದ ಮೇರೆಗೆ ಈಗಾಗಲೇ ಸರ್ವೇ ಕಾರ್ಯ ಮಾಡಿರುವಂತೆ ಬಾದಾಮಿ ಅಗಸ್ತ್ಯ ತೀರ್ಥ ಹೊಂಡದ ಮೇಲಿರು ಒಟ್ಟು 96 ಮನೆಗಳು/ ಕಟ್ಟಡಗಳು ಹಾಗೂ ಐಹೊಳೆ ಗ್ರಾಮದಲಿರುವ ರಕ್ಷಿತ, ಅರಕ್ಷಿತ ಸ್ಮಾರಕಗಳಲ್ಲಿ ವಾಸವಾಗಿರುವ ಕುಟುಂಬಗಳ 134 ಮನೆಗಳನ್ನು ಸ್ಥಳಾಂತರಿಸಲು ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಾಹಣಾ ಪ್ರಾಧಿಕಾರದ ಆಯುಕ್ತರು ಹಾಗೂ ಬಾಗಲಕೋಟೆ ಉಪ ವಿಭಾಗಾಧಿಕಾರಿಗಳು ಶೀಘ್ರದಲ್ಲಿ ಅಲ್ಲಿಯ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಆ ಕುಟುಂಬಗಳಿಗೆ ಮನವೊಲಿಸಿ ಕಾನೂನು ಪ್ರಕಾರ ತೆರವುಗೊಳಿಸುವ ಮೂಲಕ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಐಹೊಳೆ ಗ್ರಾಮದದಲ್ಲಿರುವ ರಕ್ಷಿತ, ಅರಕ್ಷಿತ ಸ್ಮಾರಕಗಳಲ್ಲಿ ವಾಸವಾಗಿರುವ ಕುಟುಂಬಗಳ ಸ್ಥಳಾಂತರಕ್ಕೆ ಜಮೀನು ಖರೀದಿಸಲು ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ 350 ಲಕ್ಷ ಬಿಡುಗಡೆಯಾಗಿದ್ದು, 134 ಮನೆಗಳ ಸ್ಥಳಾಂತರಕ್ಕೆ ಐಹೊಳೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 13-11 ಎ/ಗುಂ ಜಮೀನನ್ನು ಪ್ರತಿ ಎಕರೆಗೆ 22 ಲಕ್ಷ ರೂ.ಗಳಂತೆ ನೇರ ಖರೀದಿಯಾಗಿರುತ್ತದೆ. ಖರೀದಿಯಾಗಿರುವ ಈ ಜಮೀನಿಗೆ ತಂತಿಬೇಲಿ, ನಾಮಲಕ ಅಳವಡಿಸಲು ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಅಂದಾಜು ಪಟ್ಟಿ ಸಲ್ಲಿಸಿರುತ್ತಾರೆ. ಅದೇ ರೀತಿ ಬಾದಾಮಿ ಗುಹಾಂತರ ದೇವಾಲಯದ ಬಳಿಯ ಅಗಸ್ತ್ಯ ತೀರ್ಥ ಹೊಂಡದ ಮೇಲಿರುವ ಮನೆಗಳನ್ನು ಸ್ಥಳಾಂತರ ಕಾರ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆಯವರು 150 ಲಕ್ಷ ರೂ.ಗಳ ಅಂದಾಜು ಮೊತ್ತದಲ್ಲಿ ಬಾದಾಮಿ ನಗರದ ಸರ್ವೆ ನಂ 245/2 ರಲ್ಲಿ 3 ಎಕರೆ ಜಮೀನನ್ನು ಖರೀದಿಸಿ, ನಿರ್ಮಿತಿ ಕೇಂದ್ರದ ಮೂಲಕ ಅಂದಾಜು 120 ಲಕ್ಷ ರೂ.ಗಳ ವೆಚ್ಚದಲ್ಲಿ ಲೇಔಟ್ ಅಭಿವೃದ್ಧಿಪಡಿಸಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿರುವ ಪಾರಂಪರಿಕ ಸ್ಮಾರಕಗಳ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೊಸ ಕಟ್ಟಡಗಳಿಗೆ ಅಧಿಕಾರಿಗಳು ಅನುಮತಿಯನ್ನು ನೀಡಬಾರದು. ಸ್ಮಾರಕಗಳ ಹತ್ತಿರ ನೋ ಕನ್‌ಸ್ಟ್ರಕ್ಷನ್ ಜೋನ್ ಅಂತ ಮಾಡಿಕೊಂಡು ಎಲ್ಲ ಕಾರ್ಯಗಳನ್ನು ತ್ವರಿತ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪುರಾತತ್ವ ಅಧೀಕ್ಷಕ ರಮೇಶ ಮೂಲಿಮನಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net