ಬಾಗಲಕೋಟೆ ನಗರದ ಕೌಲಪೇಟೆ ಭಾಗದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪ್ರಚಾರ ಕೈಗೊಂಡು ಮತ ಯಾಚಿಸಿದರು. ಮುಖಂಡರಾದ ನಾಗರಾಜ ಹದ್ಲಿ, ಫೀರಪ್ಪ ಮ್ಯಾಗೇರಿ, ಸಂತೋಷ ಹೊಕ್ರಾಣಿ ಮತ್ತಿತರರು ಇದ್ದರು.
ಬಾಗಲಕೋಟೆ: ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳ ಮೂಲಕ ಜನ ಸಾಮಾನ್ಯರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಉಪ ಚುನಾವಣೆ ಅಭ್ಯರ್ಥಿ ಉಮೇಶ ಮೇಟಿ ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಆಲೂರ, ಆಲೂರ ಎಲ್‌ಟಿ ಗ್ರಾಮದಲ್ಲಿ ಗುರುವಾರ ಪ್ರಚಾರ ಸಭೆ ನಡೆಸಿದ ಅವರು, ಗ್ರಾಮೀಣ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ನಮ್ಮ ತಂದೆ ದಿ. ಎಚ್.ವೈ. ಮೇಟಿ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಆಲೂರ ಅಗಸಿಯಿಂದ ಮಾಸ್ತಿಹಾಳವರೆಗೆ ರಸ್ತೆ ನಿರ್ಮಾಣ, ಆಲೂರ ಎಲ್‌ಟಿ, ಸೀತಿಮನಿ, ಹಿರೇಗುಳಬಾಳ, ಮುತ್ತತ್ತಿ ಗ್ರಾಮದ ಹಿಂದುಳಿದ ವರ್ಗದವರ ಕಾಲನಿಗಳಲ್ಲಿ ಸಿಸಿ ರಸ್ತೆ, ಲವಳೇಶ್ವರ ತಾಂಡಾದಿಂದ ಸಿದ್ಧೇಶ್ವರ ಗುಡಿವರೆಗೆ ರಸ್ತೆ, ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಣ ಇತ್ಯಾದಿ ಕಾಮಗಾರಿಗಳನ್ನು ಗ್ರಾಮಸ್ಥರ ಬೇಡಿಕೆಯಂತೆ ಈಡೇರಿಸಲು ಶ್ರಮಿಸಿದ್ದಾರೆ. ಅವರ ನಿಧನದ ನಂತರ ಅವರ ಕನಸಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಪಕ್ಷದ ಮುಖಂಡರು ನನಗೆ ಆದೇಶಿಸಿದ್ದಾರೆ. ಹೀಗಾಗಿ ತಮ್ಮ ಆಶೀರ್ವಾದ ಬೇಕು ಎಂದು ಕೋರಿದರು.
ನಂತರ ಚಿಕ್ಕಗುಳಬಾಳ, ಹಿರೇಗುಳಬಾಳ, ಮುತ್ತತ್ತಿ, ಹಿರೇಗುಳಬಾಳ ಎಲ್‌ಟಿ, ಜಡ್ರಾಮಕುಂಟಿ, ಹೊದ್ಲೂರು, ಲವಳೇಶ್ವರ ಎಲ್‌ಟಿ, ಕಡ್ಲಿಮಟ್ಟಿ ಸ್ಟೇಷನ್ ಭಾಗದಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡು ಮತಯಾಚಿಸಿದರು. ವಿವಿಧ ಗ್ರಾಮಗಳ ಮುಖಂಡರ ಜೊತೆ ಸಭೆಗಳನ್ನು ನಡೆಸಿದರು.
ನಗರದಲ್ಲಿ ಬಿರುಸಿನ ಪ್ರಚಾರ : ಬಾಗಲಕೋಟೆ ನಗರದ ಕೌಲಪೇಟೆಯಲ್ಲಿ ಗುರುವಾರ ಬೆಳಗ್ಗೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹಾಗೂ ಪಕ್ಷದ ಮುಖಂಡರ ಜೊತೆ ಮತಯಾಚನೆ ನಡೆಸಿದರು.
ಬಡವರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಎಚ್.ವೈ. ಮೇಟಿ ಅವರ ಪುತ್ರ ಉಮೇಶ ಮೇಟಿ ಅವರನ್ನು ಬಹುಮತದಿಂದ ಗೆಲ್ಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಸಚಿವ ತಿಮ್ಮಾಪೂರ ವಿನಂತಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ, ಸಮಗ್ರ ಅಭಿವೃದ್ಧಿಯೊಂದಿಗೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಮ್ಮ ತಂದೆಯವರ ಕನಸು ಸಾಕಾರಗೊಳಿಸಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮುಖಂಡರಾದ ಪ್ರಕಾಶ ತಪಶೆಟ್ಟಿ, ಮಲ್ಲಿಕಾರ್ಜುನ ಚರಂತಿಮಠ, ಮಲ್ಲಿಕಾರ್ಜುನ ಮೇಟಿ, ನಾಗರಾಜ ಹದ್ಲಿ, ಸಂಜೀವ ವಾಡಕರ, ಸಂತೋಷ ಹೊಕ್ರಾಣಿ ಮತ್ತಿತರರು ಇದ್ದರು.