ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಮುಖಂಡರಾದ ದುಂಡಪ್ಪ ಯರಗಟ್ಟಿ, ಮುತ್ತಪ್ಪ ಕೋಮಾರ, ಮಹೇಶಗೌಡ ಪಾಟೀಲ ಇದ್ದರು.
ಮುಧೋಳ: ಬಾಕಿ ಬಿಲ್ ನೀಡಬೇಕು, ಪ್ರಸಕ್ತ ವರ್ಷ ಪ್ರತಿ ಟನ್‌ಗೆ 3,500 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಬುಧವಾರ ಉಗ್ರ ಹೋರಾಟ ನಡೆಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ, ಕೇಂದ್ರ ಸರ್ಕಾರಗಳು ಸಕ್ಕರೆ ಲಾಬಿಗೆ ಮಂಡಿಯೂರಿವೆ ಎಂದು ಕಿಡಿಕಾರಿದರು.
ಜಿಲ್ಲಾ ಅಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಸರ್ಕಾರ, ಕಾರ್ಖಾನೆ, ಮಾಲೀಕರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾದರೂ ರೈತರು ಬೆಳೆದ ಬೆಳೆಗೆ ಮಾತ್ರ ಏರಿಕೆ ಮಾಡಲು ಹಿಂದೇಟು ಹಾಕುತ್ತೀವೆ. ಯಾರು ಏನೇ ಅಂದರು ಈ ಸಾರಿ ಟನ್ ಕಬ್ಬಿಗೆ 3,500 ರೂ. ಬೆಲೆ ಪಡೆದೇ ತೀರುತ್ತೇವೆ. ಜತೆಗೆ ಬಾಕಿ ಬಿಲ್ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಐಸಿಪಿಎಲ್ ಕಾರ್ಖಾನೆ ಹಾಗೂ ಸಮೀರವಾಡಿ ಕಾರ್ಖಾನೆ 114 ರೂ. ಗಳ ಬಾಕಿ ನೀಡಲು ಮುಂದಾಗಿವೆ. ನಿರಾಣಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗುವುದು. ಬಾಕಿ ಹಣ ಪಾವತಿಸಿದ ಹೊರತು ಕಾರ್ಖಾನೆ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.