ಗುಳೇದಗುಡ್ಡದ ಬಾಲಕರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ವೈ.ಆರ್. ಹೆಬ್ಬಳ್ಳಿ, ಎಸ್.ಎ. ಮೋಮಿನ, ಸಮೀರ ಡಾಲಾಯತ, ರಜಾಕ್ ಕುದರಿ ಇತರರಿದ್ದರು.
ವಿದ್ಯಾರ್ಥಿಗಳು ಸರ್ಕಾರದ ಶಿಕ್ಷಣ ಯೋಜನೆಗಳ ಸದುಪಯೋಗ ಪಡೆದು ಉನ್ನತ ಗುರಿಯತ್ತ ಸಾಗಬೇಕು.
ಗುಳೇದಗುಡ್ಡ:
ನಿರಂತರ ಅಧ್ಯಯನ, ಪರಿಶ್ರಮ ಹಾಗೂ ಶಿಸ್ತುಬದ್ಧ ಜೀವನವೇ ಯಶಸ್ಸಿನ ಮೂಲಮಂತ್ರವಾಗಿದ್ದು, ವಿದ್ಯಾರ್ಥಿಗಳು ಸರ್ಕಾರದ ಶಿಕ್ಷಣ ಯೋಜನೆಗಳ ಸದುಪಯೋಗ ಪಡೆದು ಉನ್ನತ ಗುರಿಯತ್ತ ಸಾಗಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಧನೆ ಯಾರೊಬ್ಬರ ಸ್ವತ್ತಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಗುರಿಯತ್ತ ನಿರಂತರ ಶ್ರಮಿಸಿದರೆ ಯಶಸ್ಸು ಖಚಿತ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಗುರು-ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಮೊಬೈಲ್‌ನ್ನು ಶಿಕ್ಷಣಕ್ಕೆ ಪೂರಕವಾಗಿ ಬಳಸಬೇಕು ಹೊರತು ಅನಗತ್ಯ ಬಳಕೆಯಿಂದ ಸಮಯ ವ್ಯರ್ಥ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಹಾವಿದ್ಯಾಲಯದ ಸಭಾಂಗಣ ಅಭಿವದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ ಹಾಗೂ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ವೈ.ಆರ್. ಹೆಬ್ಬಳ್ಳಿ, ಎಸ್.ಎ. ಮೋಮಿನ, ಸಮೀರ ಡಾಲಾಯತ, ರಜಾಕ್ ಕುದರಿ, ಬಾಬು ಬೊಂಬಲೇಕರ, ಮೋತಿಲಾಲ್ ರಾಠೋಡ, ರಮೇಶ ಅಗಸಿಮನಿ, ಅಂಬರೀಶ ಕವಡಿಮಟ್ಟಿ, ಜಮೀರ್ ಮೌಲ್ವಿ, ಯಲಗುರದಪ್ಪ ಗೌಡರ, ಪ್ರಾಚಾರ್ಯ ವಿಠ್ಠಲ ಕಳಸಾ, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.