ಬಾಗಲಕೋಟೆ: ವೀರಶೈವ ಲಿಂಗಾಯತ ಎಲ್ಲ ಒಳ ಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸುಮಾಡಿ ಕಳುಹಿಸಬೇಕಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮೀಸಲಾತಿ ಬಗ್ಗೆ ಪ್ರಶ್ನಿಸಿದಾಗ ಶ್ರೀಗಳು ಈ ರೀತಿ ವಿವರಣೆ ನೀಡಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ರಾಜ್ಯ ಸರ್ಕಾರ 2ಸಿ, 2ಡಿ ಎಂದು ಮಾಡಿದರು. ಆದರೆ, 2ಬಿ ಮೀಸಲಾತಿ ತೆಗೆದು ಹಂಚಿಕೆ ಮಾಡಿದ್ದರಿಂದ ಪ್ರಕರಣ ನ್ಯಾಯಾಲಯಕ್ಕೆ ಹೋಗಿದೆ. ಅದೇ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಮಾಡಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ ರೀತಿಯಲ್ಲಿ 2ಸಿ, 2ಡಿ ವಿಚಾರದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದರೆ ಯಾರೂ ನ್ಯಾಯಾಲಯಕ್ಕೆ ಹೋಗುತ್ತಿರಲಿಲ್ಲ ಎಂದರು.
ಸದ್ಯ ನಾವು ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ದಾಖಲೆಗಳನ್ನು ನೀಡುತ್ತಿದ್ದೇವೆ. ರಾಜ್ಯ ಸರ್ಕಾರ ಸಹ ನಮಗೆ ಸ್ಪಂದಿಸುತ್ತಿದೆ. ಈ ಬಗ್ಗೆ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರೊಂದಿಗೆ ಮೌಖಿಕ ಚರ್ಚೆ ಮಾಡಿದ್ದು, ಈ ಬಗ್ಗೆ ಚರ್ಚಿಸಲು ಬನ್ನಿ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ವಚನಾನಂದ ಶ್ರೀಗಳು, ಸಮಾಜಕ್ಕೆ ಶ್ರೀಗಳ ಕೊಡುಗೆ ಇದೆ. ವಿವಾದದ ಬಳಿಕವೂ ಶ್ರೀಗಳ ಜೊತೆಗೆ ನಾನು ವೇದಿಕೆ ಹಂಚಿಕೊಂಡಿದ್ದೇನೆ ಎಂದರು.
ಪಂಚಮಸಾಲಿ ಸಮಾಜದ 2ಎ ಮೀಸಲಾತಿ ವಿಚಾರವಾಗಿ ರಾಜ್ಯದ ಸಿದ್ದರಾಮಯ್ಯ ಸರ್ಕಾರ ನಮಗೆ ಸ್ಪಂದಿಸುತ್ತಿಲ್ಲ ಎಂದಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ಗಮನಕ್ಕೆ ತಂದಾಗ, ಸಂವಿಧಾನಿಕ ಹಕ್ಕು ಪಡೆಯಲು ಕಾನೂನು ಪ್ರಕ್ರಿಯೆ ನಡೆಸಬೇಕಾಗುತ್ತದೆ. ನಾವು ಆ ಕೆಲಸವನ್ನು ಮಾಡುತ್ತಿದ್ದೇವೆ. ಸರ್ಕಾರದ ಬಗ್ಗೆ ನಮಗೆ ಭರವಸೆ ಇದೆ. ಅಧಿಕಾರ ಇರುವ ಸರ್ಕಾರದ ವಿರುದ್ಧ ನಿಲ್ಲಲು ಆಗಲ್ಲ. ಅವರಿಗೆ ಮನದಟ್ಟು ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಲಿಂಗಾಯತ ಸಮುದಾಯದ ದೊಡ್ಡ ಸಮಾಜ ಪಂಚಮಸಾಲಿ ಸಮಾಜ. 2009ರ ಮೊದಲು ಮೀಸಲಾತಿ ಪಟ್ಟಿಯಲ್ಲಿ ನಮ್ಮ ಸಮಾಜದ ಹೆಸರು ಇರಲಿಲ್ಲ. ನಾವೆಲ್ಲ ಒತ್ತಾಯ ಮಾಡಿದ ಬಳಿಕ ಮೀಸಲಾತಿ ಪಟ್ಟಿಯಲ್ಲಿ ಸಮಾಜದ ಹೆಸರು ಬಂದಿತು. ಯಡಿಯೂರಪ್ಪ ಅವರಿಗೆ ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಆಸಕ್ತಿ ಇತ್ತು. ಇದೀಗ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದರು.
ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿದರೆ ನಮ್ಮ ಮಕ್ಕಳಿಗೆ ಮೆಡಿಕಲ್ ಸೀಟು, ನವೋದಯ ಸೀಟು, ಐಎಎಸ್, ಐಪಿಎಸ್‌ನಂತ ಹುದ್ದೆಗಳಿಗೆ ಹೋಗಲು ಹೆಚ್ಚು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.
ಜನವರಿ 15ರಂದು ಹರ ಜಾತ್ರೆ
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ.15ರಂದು ‘ಹರ ಜಾತ್ರೆ’ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಹೇಳಿದರು.
ವಚನಾನಂದ ಸ್ವಾಮೀಜಿಯವರು ಪೀಠಕ್ಕೆ ಬಂದು ಎಂಟು ವರ್ಷಗಳಾದ ಹಿನ್ನೆಲೆಯಲ್ಲಿ ಅಷ್ಟಮ ವಾರ್ಷಿಕ ಪೀಠಾರೋಹಣ, ಮಹಾಂತ ಸ್ವಾಮೀಜಿಯವರ 15ನೇ ಪುಣ್ಯಸ್ಮರಣೆ ಆಚರಿಸಲಾಗುವುದು ಎಂದರು.
ಗುರುಭವನ, ದಾಸೋಹ ಭವನ, ಹರ ಮಂದಿರ, ಧ್ಯಾನ ಮಂದಿರ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅತಿಥಿ ಗೃಹವನ್ನೂ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯಕ್ಕೆ ದ್ವಿಶತಮಾನೋತ್ಸವ ಆಗಿದೆ. ಆ ಹಿನ್ನೆಲೆಯಲ್ಲಿ ಪ್ರತಿ ವಷರ್ ಚನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಈ ವರ್ಷ ಮಹಿಳೆಗೆ ನೀಡಲಾಗುತ್ತಿದೆ. ಸಮಿತಿ ರಚಿಸಲಾಗಿದ್ದು, ಜ. 10ರಂದು ಪ್ರಶಸ್ತಿ ಪ್ರಕಟಿಸಲಾಗುವುದು ಎಂದರು.