ಮೊಬೈಲ್ ವ್ಯಾಮೋಹದಿಂದ ದೂರವಿರಿ

ಹುನಗುಂದ ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಡಾ. ಮಹಾಂತೇಶ ಕಡಪಟ್ಟಿ, ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಎಂ.ಎಸ್.ಮಠ, ವಿ.ಪಿ. ಬಳೂಟಗಿ, ಎಸ್.ಸಿ. ರಾಜೂರ ಇತರರಿದ್ದರು.
ಹುನಗುಂದ ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಡಾ. ಮಹಾಂತೇಶ ಕಡಪಟ್ಟಿ, ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಎಂ.ಎಸ್.ಮಠ, ವಿ.ಪಿ. ಬಳೂಟಗಿ, ಎಸ್.ಸಿ. ರಾಜೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಮಹಾಂತೇಶ ಕಡಪಟ್ಟಿ ಹೇಳಿಕೆ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಹುನಗುಂದ: ಯಶಸ್ಸಿನ ಹಿಂದೆ ಕೇವಲ ವಿದ್ಯಾರ್ಥಿಗಳ ಶ್ರಮ ಮಾತ್ರವಲ್ಲ, ಅವರಿಗೆ ಅಕ್ಷರ ದಾಸೋಹ ನೀಡಿದ ಶಿಕ್ಷಕರ ಮಾರ್ಗದರ್ಶನ ಹಾಗೂ ಬೆನ್ನೆಲುಬಾಗಿ ನಿಂತು ಪ್ರೊತ್ಸಾಹ ನೀಡಿದ ಪಾಲಕರ ತ್ಯಾಗವೂ ಅಡಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.
ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್-ಟಿವಿಗಳ ವ್ಯಾಮೋಹದಿಂದ ದೂರವಿದ್ದು ನಿರಂತರ ಅಧ್ಯಯನದಲ್ಲಿ ತೊಡಗಿದ್ದಕ್ಕೆ ದೊರೆತ ಪ್ರತಿಫಲವೇ ಈ ದಿನಕ್ಕೆ ಸಾಕ್ಷಿ. ನಿಮ್ಮ ಗುರಿ ಅಂತ್ಯವಲ್ಲ, ಉನ್ನತ ಭವಿಷ್ಯ ಆರಂಭವಾಗಿರಲಿ ಎಂದರು.
ಗುಳೇದಗುಡ್ಡದ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ತಾವು ಪಡೆದುಕೊಳ್ಳುವ ಅಂಕಗಳಿಂದ ಪರಿಪೂರ್ಣ ನಾಗರಿಕನಾಗಲಾರರು, ಸಂಸ್ಕಾರಯುತವಾದ ಶಿಕ್ಷಣವು ಬೇಕು. ವಿದ್ಯೆ ಜೊತೆಗೆ ವಿನಯ, ಕರುಣೆ ಮತ್ತು ಧರ್ಮದ ನಡೆ-ನುಡಿಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಧನೆ ಮಾಡಿದ 40 ವಿದ್ಯಾರ್ಥಿಗಳನ್ನು ಹಾಗೂ 100 ಕ್ಕೆ 100 ಫಲಿತಾಂಶ ಪಡೆದ ಗುರುಸಿದ್ದೇಶ್ವರ ಪ್ರೌಢಶಾಲೆ ತುಂಬ, ವಿ.ಮ. ಕನ್ನಡ ಕಾನ್ವೆಂಟ್ ಮಾದರಿ ಪ್ರೌಢಶಾಲೆ ಹುನಗುಂದ, ಐಹೊಳೆ ಪ್ರೌಢಶಾಲೆ, ವಿ.ಮ.ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹುನಗುಂದದ ಮುಖ್ಯೋಪಾಧ್ಯಾಯರನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಲಾಯಿತು.
ಸಂಘದ ನಿರ್ದೇಶಕರಾದ ಬಿ.ಎಸ್. ಕೆಂದೂರ, ಎಂ.ಎಸ್. ಮಠ, ವಿ.ಪಿ. ಬಳೂಟಗಿ, ಮುಖ್ಯ ಶಿಕ್ಷಕರಾದ ಎಸ್.ಸಿ. ರಾಜೂರ, ಆರ್.ವಿ. ಪಾಟೀಲ, ಆರ್.ಐ. ಮಾಗಾವಿ, ಪಿ.ಎಫ್. ಚವಾಣ್, ಕೆ.ಬಿ. ಲಕ್ಕನಗೌಡರ, ವೈ.ಕೆ. ವಾಲಿಕಾರ, ಎನ್. ಬಂಕದ, ಎಂ.ಐ. ರೋಣದ, ಬಿ.ಎಸ್. ಬನ್ನಟ್ಟಿ, ವಿ.ವಿ. ಕರಡಿ ಪಿ.ಎಂ. ಅಕ್ಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net