ಜಂಕ್ -ಫುಡ್‌ನಿಂದ ದೂರವಿರಿ

ಬಾಗಲಕೋಟೆ ಕಲಾಭವನದಲ್ಲಿ ಸೋಮವಾರ ವಿವಿಕೆ -ಫೌಂಡೇಶನ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಉಚಿತ ತಪಾಸಣೆ ಶಿಬಿರವನ್ನು ಮಠಾಧೀಶರು ಮತ್ತು ಮಹಿಳೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಗುರುಮಹಾಂತ ಶ್ರೀಗಳು, ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ವಿವಿಕೆ ಫೌಂಡೇಶನ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಇತರರಿದ್ದರು.
ಬಾಗಲಕೋಟೆ ಕಲಾಭವನದಲ್ಲಿ ಸೋಮವಾರ ವಿವಿಕೆ -ಫೌಂಡೇಶನ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಉಚಿತ ತಪಾಸಣೆ ಶಿಬಿರವನ್ನು ಮಠಾಧೀಶರು ಮತ್ತು ಮಹಿಳೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಗುರುಮಹಾಂತ ಶ್ರೀಗಳು, ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ವಿವಿಕೆ ಫೌಂಡೇಶನ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಮಹಾಂತ ಶ್ರೀಗಳ ಸಲಹೆ
  • ಕ್ಯಾನ್ಸರ್ ಜಾಗೃತಿ ಅಭಿಯಾನ ಆಯೋಜನೆ
ಬಾಗಲಕೋಟೆ: ಪುರುಷರಿಗೆ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುತ್ತಾರೆ. ಬಹುಶಃ ಮಹಿಳೆಯರಿಗೆ ರಾಸಾಯನಿಕ ಔಷಧ ಬಳಕೆ ಆಹಾರ ಹಾಗೂ ಜಂಕ್ -ಫುಡ್‌ನಿಂದ ಬರುತ್ತದೆ. ಹೀಗಾಗಿ ಮಹಿಳೆಯರು ಜಂಕ್ -ಫುಡ್‌ನಿಂದ ದೂರವಿರಬೇಕು ಎಂದು ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಸಲಹೆ ನೀಡಿದರು.
ನಗರದ ಕಲಾಭವನದಲ್ಲಿ ವಿವಿಕೆ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಬರದಂತೆ ಮಹಿಳೆಯರು ಜೀವನಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ತಿಳಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕ್ಯಾನ್ಸರ್ ವಾಸಿಯಾಗದಂತ ರೋಗವಾಗಿದೆ. ಭಯಂಕರ ನೋವಿನಿಂದ ನರಳಬೇಕಾಗುತ್ತದೆ ಎಂದರು.
ಟೇಸ್ಟಿಂಗ್ ಪೌಡರ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮನೆಯಲ್ಲಿಯೇ ಅಡುಗೆ ಮಾಡಿ ತಿನ್ನಿರಿ. ಹೊರಗಿನ ಆಹಾರದಿಂದ ದೂರವಿರಿ. ಮಹಿಳೆಯರು ಪೌಷ್ಟಿಕ ಆಹಾರ ಸೇವಿಸುವುದಿಲ್ಲ. ಉತ್ತಮವಾದ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರು ಜನಸೇವೆ ಮಾಡುತ್ತಾರೆ. ಗೆದ್ದಮೇಲೆ ಜನರನ್ನು ಮರೆಯುತ್ತಾರೆ. ಆದರೆ, ವೀಣಾ ಕಾಶಪ್ಪನವರ ಅಽಕಾರದಲ್ಲಿ ಇಲ್ಲದಿದ್ದರೂ ಜನಸೇವೆ ಮಾಡುತ್ತಿದ್ದಾರೆ. ಉತ್ತಮ ಕೆಲಸ ಮಾಡುವವರನ್ನು ಸದಾ ಬೆಂಬಲಿಸಬೇಕು ಎಂದು ಹೇಳಿದರು.
ವಿವಿಕೆ ಫೌಂಡೇಶನ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಜನರನ್ನು ಕಾಡುತ್ತಿದೆ. ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. ಆ ಕಾರಣಕ್ಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆರೋಗ್ಯಕ್ಕೂ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಶಿರೂರ ಬಸವಲಿಂಗ ಸ್ವಾಮೀಜಿ, ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು, ಮಾಣಿಕೇಶ್ವರಿ, ಜಾನಪದ ಕಲಾವಿದೆ ಗೌರಮ್ಮ ಸಂಕಿನಮಠ ಮತ್ತಿತರರು ಇದ್ದರು.
ಗಾಯಕ ಹನುಮಂತ ಲಮಾಣಿ, ಕಲಾವಿದೆ ಅಶ್ವಿನಿಗೌಡ, ನಟ ಪ್ರಥಮ, ಗಾಯಕ ಮಾಳು ನಿಪನಾಳ, ಗಾಯಕಿ ಅನಘಾ ಪಾಟೀಲ ಗಾಯನದ ಮೂಲಕ ಜನರನ್ನು ರಂಜಿಸಿದರು. ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹಾಸ್ಯ ಚಟಾಕಿಗಳ ಮೂಲಕ ನಗೆಗಡಲಲ್ಲಿ ತೇಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net