ಜು. 24ರಂದು ರಾಜ್ಯಮಟ್ಟದ ವಿಚಾರ ಸಂಕಿರಣ

ಜಮಖಂಡಿ ನಗರದ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಡಿಎಸ್‌ಎಸ್ ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಶುರಾಮ ಮಾಂಗ, ಪುಂಡಲೀಕ ಮಾದರ, ಆನಂದ ಮೇತ್ರಿ, ಪ್ರಕಾಶ ಜಂಬಗಿ ಇದ್ದರು.
ಜಮಖಂಡಿ ನಗರದ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಡಿಎಸ್‌ಎಸ್ ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಶುರಾಮ ಮಾಂಗ, ಪುಂಡಲೀಕ ಮಾದರ, ಆನಂದ ಮೇತ್ರಿ, ಪ್ರಕಾಶ ಜಂಬಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಎಸ್‌ಎಸ್ ರಾಜ್ಯ ಸಂಚಾಲಕ ಶಾಮರಾವ್ ಘಾಟಗೆ ಹೇಳಿಕೆ
  • ಶಿಕ್ಷಣಕ್ಕೆ ಆದ್ಯತೆ ನೀಡಿ
ಜಮಖಂಡಿ: ಬುದ್ಧ, ಬಸವ ಮತ್ತು ಅಂಬೇಡ್ಕರ ಜಯಂತಿ ಅಂಗವಾಗಿ ಪ್ರಜಾಪ್ರಭುತ್ವದಲ್ಲಿ ದಲಿತರ ಸ್ಥಾನಮಾನ ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವು ಜು. 24ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಡಿಎಸ್‌ಎಸ್ (ನಾಗವಾರ ಬಣ) ರಾಜ್ಯ ಸಂಚಾಲಕ ಶಾಮರಾವ್ ಘಾಟಗೆ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಮಾನತೆ, ಅಸ್ಪೃಶ್ಯತೆ ಹಾಗೂ ಹಸಿವಿನಿಂದ ನೊಂದಿದ್ದ ಮೂಲ ನಿವಾಸಿಗಳ ಬದುಕನ್ನು ಬದಲಿಸಲು ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದಲ್ಲಿ ಅಸಮಾನತೆ ವಿರುದ್ಧದ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕಿದೆ. ಆದರೆ, ಪ್ರಸ್ತುತ ಕೇವಲ ಆರ್ಥಿಕತೆಗೆ ಸಂಬಂಧಿಸಿದ ಬಿಲ್‌ಗಳು ಮಾತ್ರ ಪಾಸ್ ಆಗುತ್ತಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನದ ಮೂಲ ಆಶಯಗಳ ಬಗ್ಗೆ ಚರ್ಚಿಸಿ, ಅದನ್ನು ಯುವ ಜನತೆಗೆ ತಿಳಿಸಿಕೊಡುವ ಮೂಲಕ ಸೂಕ್ತ ನಿರ್ಧಾರಕ್ಕೆ ಬರಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಶೋಷಿತ ಸಮುದಾಯಗಳು ಇಂದಿಗೂ ಶಿಕ್ಷಣದ ಕಡೆಗೆ ಹೆಚ್ಚಿನ ಒಲವು ತೋರುತ್ತಿಲ್ಲ. ಮತ್ತೊಂದೆಡೆ ಮಹಿಳಾ ಮೀಸಲಾತಿ ಕುರಿತು ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ದಲಿತ ಮಹಿಳೆಯರ ಪಾಲ್ಗೊಳ್ಳುವಿಕೆ ಸೇರಿ ಹಲವಾರು ಪ್ರಮುಖ ವಿಷಯಗಳ ಕುರಿತು ಸಂವಾದ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ರಾಜ್ಯಾದಾದ್ಯಂತ ಇರುವ ಸಂಘಟನೆಯ ಎಲ್ಲ ಪದಾಧಿಕಾರಿಗಳು, ಮಹಿಳೆಯರು, ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಹಿತ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಮುಖಂಡರಾದ ಪರಶುರಾಮ ಮಾಂಗ, ಪುಂಡಲೀಕ ಮಾದರ, ಆನಂದ ಮೇತ್ರಿ, ಪ್ರಕಾಶ ಜಂಬಗಿ, ಮುತ್ತಣ್ಣ ಮೇತ್ರಿ, ಬಸವರಾಜ ಜಮಖಂಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net