ರಾಜ್ಯಮಟ್ಟದ ಮೆಡಿಕೊ-ಲೀಗಲ್ ಸಮ್ಮೇಳನ

ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಪಾಟೀಲ, ಡೀನ್ ಡಾ. ಧರ್ಮರಾಯ ಇಂಗಳೆ ಇತರರಿದ್ದರು.
ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಪಾಟೀಲ, ಡೀನ್ ಡಾ. ಧರ್ಮರಾಯ ಇಂಗಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಎಸ್.ಆರ್. ಪಾಟೀಲ ಮಾಹಿತಿ
  • ನ್ಯಾಯಾಧೀಶರು, ವೈದ್ಯರು, ವಕೀಲರು, ವಿಜ್ಞಾನಿಗಳು ಭಾಗಿ
  • ಕರ್ನಾಟಕ, ಆಂಧ್ರ, ಮಹರಾಷ್ಟ್ರ, ತಮಿಳುನಾಡಿನಿಂದ ಆಗಮಿಸಲಿರುವ ಪ್ರತಿನಿಧಿಗಳು
ಬೀಳಗಿ: ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನ. 7 ಮತ್ತು 8ರಂದು ಎರಡು ದಿನಗಳ ಕೆಎಎಂಎಲ್‌ಎಸ್ ಸೊಸೈಟಿಯ 33ನೇ ರಾಜ್ಯಮಟ್ಟದ ಮೆಡಿಕೊ-ಲೀಗಲ್ ಸಮ್ಮೇಳನವು ಬೀಳಗಿಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಎಸ್ಸಾರ‌್ಪಿ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಬಾಡಗಂಡಿಯ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ವೈದ್ಯಕೀಯ ವೃತ್ತಿ, ಖಾಸಗಿ, ಕ್ರಿಮಿನಲ್ ಕಾನೂನು ವಕೀಲರು, ಪೊಲೀಸ್, ನ್ಯಾಯಾಧೀಶರು, ವಿಜ್ಞಾನಿಗಳು, ಪ್ರಾಸಿಕ್ಯೂಷನ್ ಕ್ಷೇತ್ರಗಳ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.
ನ. 7ರಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ರಾಜ್ಯಮಟ್ಟದ ಮೆಡಿಕೊ-ಲೀಗಲ್ ಸಮ್ಮೇಳನವನ್ನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ರವಿ ಹೊಸಮನಿ ಉದ್ಘಾಟಿಸುವರು. ಬೆಳಗಾವಿ ಪೊಲೀಸ್ ಐಜಿಪಿ ಚೇತನಸಿಂಗ್ ರಾಥೋರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಾಜಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು.
ನ. 8ರಂದು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಎಂಆರ್‌ಐ ಸ್ಕ್ಯಾನರ್ ಉದ್ಘಾಟನೆಯಾಗಲಿದೆ ಎಂದು ತಿಳಿಸಿದ ಎಸ್.ಆರ್. ಪಾಟೀಲ, ಹಲವು ಕ್ರೈಂ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕೇ ಹೊರತು ಒಬ್ಬ ಮುಗ್ಧ ನಿರಪರಾಧಿಗೆ ಶಿಕ್ಷೆಯಾಗಬಾರದು. ಈ ದಿಸೆಯಲ್ಲಿ ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಅಪರಾಧದ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಾಗಲಿದೆ ಎಂದರು.
ಕರ್ನಾಟಕ ಮೆಡಿಕೊ-ಲೀಗಲ್ ಸೊಸೈಟಿ ಅಧ್ಯಕ್ಷರು ಹಾಗೂ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನ ಡೀನ್ ಡಾ. ಧರ್ಮರಾಯ ಇಂಗಳೆ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯದಿಂದ ವೈದ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ವಿಭಾಗದಲ್ಲಿ ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕಗಳು ಇವೆ. ಆದರೆ ನಾವು ಇಂಗ್ಲಿಷ್‌ನಲ್ಲಿ ಇರುವ ಪುಸ್ತಕವನ್ನು ಕನ್ನಡ ಭಾಷೆಯಲ್ಲಿ ವಿಧಿ ವೈದ್ಯಕೀಯ ಶಾಸ್ತ್ರ ಮತ್ತು ವಿಧಿ ಶಾಸ್ತ್ರ ಪುಸ್ತಕ ಬರೆಯಲಾಗಿದ್ದು ಇದರಿಂದ ಪೊಲೀಸ್ ಇಲಾಖೆ, ನ್ಯಾಯಾಲಯಕ್ಕೆ, ವೈದ್ಯರಿಗೆ ಮತ್ತು ಇತರರಿಗೆ ಇದರಲ್ಲಿರುವ ಮಾಹಿತಿ ಬಹಳ ಉಪಯುಕ್ತವಾಗುವುದು ಎಂದು ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಪಾಟೀಲ, ಸಂಸ್ಥೆ ಉಪಾಧ್ಯಕ್ಷ ಅನುಷಾ ನಾಡಗೌಡ ಪಾಟೀಲ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ವಿಜಯಾನಂದ ಹಳ್ಳಿ, ಮುಖ್ಯ ಹಣಕಾಸು ಅಧಿಕಾರಿ ಅಶೋಕ ದಾದಮಿ, ಬಿಎಎಂಎಸ್ ಕಾಲೇಜಿನ ಪ್ರಾಂಶುಪಾಲ ರಾಜೇಶ್ವರಿ ಬಿರಾದಾರ, ಡಾ. ಸೋಮಶೇಖರ ಪೂಜಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net