ಲೋಕಾಪುರ ಪಟ್ಟಣದ ಬಿವಿವಿ ಮಹಿಳಾ ಪ.ಪೂ. ಕಾಲೇಜು ಹಾಗೂ ಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು. ಎಸ್.ಬಿ. ಪಾಟೀಲ, ಎಸ್.ಎಂ. ಹುದ್ದಾರ ಇತರರಿದ್ದರು.
ಲೋಕಾಪುರ: ಕ್ರೀಡಾ ಮನೋಭಾವನೆಗಳು ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಛಲ ಬಿಡದೆ ಸಾಧನೆ ಮಾಡಲು ಪ್ರೇರೇಪಿಸುತ್ತವೆ ಎಂದು ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿವಿವಿಎಸ್ ಮಹಿಳಾ ಪ.ಪೂ. ಕಾಲೇಜು ಹಾಗೂ ಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಮನಸ್ಸಿನ ನಾಗರಿಕರೇ ಸ್ವಸ್ವ ಸಮಾಜದ ರೂವಾರಿಗಳು. ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡೆಯು ಸ್ನೇಹ ಮತ್ತು ಒಗ್ಗಟ್ಟಿನ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.
ಮುಖ್ಯೋಪಾಧ್ಯಾಯ ಎಸ್.ಬಿ. ಪಾಟೀಲ ಮಾತನಾಡಿ, ಕ್ರೀಡೆಗಳಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದರೆ ಆರೋಗ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬಹುದು. ನಮ್ಮ ಸಂಸ್ಥೆಯೂ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ ವಿದ್ಯಾರ್ಥಿಗಳ ಬೆಳವಣೆಗೆಗೆ ಸಹಾಯ, ಸಹಕಾರ ನೀಡಿ ವಿದ್ಯಾರ್ಥಿಗಳು ಭಾಗವಹಿಸಲು ಪ್ರೋತ್ಸಾಹ ನೀಡುತ್ತೇವೆ ಎಂದರು.
ಪ್ರಾಚಾರ್ಯ ಎಸ್.ಎಂ. ಹುದ್ದಾರ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಜೊತೆಗೆ ಸುಧಾರಣೆ, ಸಾಧನೆ ಮತ್ತು ವೈಯಕ್ತಿಕ ಪ್ರಗತಿಯ ಭಾವನೆ ಬೆಳೆಯುವುದರಿಂದ ಉತ್ತಮ ಮತ್ತು ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗುತ್ತದೆ ಎಂದರು.
ವಿದ್ಯಾರ್ಥಿನಿಯರಿಂದ ವಿವಿಧ ತಂಡಗಳ ಶಿಸ್ತುಬದ್ಧ ಪಥ ಸಂಚಲನ ನಡೆಯಿತು. ಕಾಲೇಜು ವಿಭಾಗದ ಕ್ರೀಡಾ ಉಪನ್ಯಾಸಕ ಆರ್.ಎಚ್. ತೋಳಮಟ್ಟಿ, ಬಿಪ್ಸ್ ಶಾಲೆಯ ಅಡಿವೇಶ ಕಳ್ಳಿ, ಮಹಾಂತೇಶ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಚೌಧರಿ ಯಮುನಾ ಜಂಬಗಿ, ಆರ್.ವಿ. ಮುತಾಲೀಕ ದೇಸಾಯಿ, ಸಂಜು ನರಸಾಪುರ ಇತರರಿದ್ದರು.