ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಎಸ್‌ಐಆರ್ ಬಗ್ಗೆ ಹಾಗೂ ಬಿಎಲ್‌ಎ-2 ತರಬೇತಿಯಲ್ಲಿ ಭಾರತ ಮಾತಾ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ರಾಜು ನಾಯ್ಕರ್ ಮತ್ತಿತರರು ಇದ್ದರು.
ಬಾಗಲಕೋಟೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಕೇವಲ ಚುನಾವಣಾ ಆಯೋಗದ ಕೆಲಸ ಎಂದು ಭಾವಿಸದೆ, ಅದು ನಮ್ಮ ಹಕ್ಕು ಎಂದು ಪರಿಗಣಿಸಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ವತಿಯಿಂದ ಮಂಗಳವಾರ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಎಸ್‌ಐಆರ್ ಹಾಗೂ ಬಿಎಲ್‌ಎ-2 ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೂತ್ ಮಟ್ಟದಿಂದ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಮಂಡಲಗಳವರೆಗೆ ಎಸ್‌ಐಆರ್ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಅಪಪ್ರಚಾರದ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಮತದಾರರ ಪಟ್ಟಿಯನ್ನು ನಿಖರ ಮತ್ತು ದೋಷರಹಿತವಾಗಿಸಲು ಕಾರ್ಯಕರ್ತರು ಶ್ರಮಿಸಬೇಕು. ಪ್ರತಿ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಬಸವರಾಜ ಯಂಕAಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ರಾಜು ಮುದೆನೂರ, ಶಶಿಕುಮಾರ ಗಟ್ಟೆನ್ನವರ, ಮಲ್ಲು ಮುತ್ತಪ್ಪನ್ನವರ ಉಪಸ್ಥಿತರಿದ್ದರು.