ಸಿದ್ಧರಾಮೇಶ್ವರರ ವಚನಗಳು ಬದುಕಿಗೆ ಆದರ್ಶ

 ಬಾಗಲಕೋಟೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಪಿ.ಎಚ್. ಪೂಜಾರ ಚಾಲನೆ ನೀಡಿದರು. ಎಡಿಸಿ ಅಶೋಕ ತೇಲಿ, ಸಮುದಾಯದ ಮುಖಂಡ ಅಶೋಕ ಲಿಂಬಾವಳಿ ಮತ್ತಿತರರು ಇದ್ದರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಪಿ.ಎಚ್. ಪೂಜಾರ ಚಾಲನೆ ನೀಡಿದರು. ಎಡಿಸಿ ಅಶೋಕ ತೇಲಿ, ಸಮುದಾಯದ ಮುಖಂಡ ಅಶೋಕ ಲಿಂಬಾವಳಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಷತ್ ಸದಸ್ಯ ಪೂಜಾರ ಅಭಿಮತ
  • ಭಾವಚಿತ್ರದ ಅದ್ದೂರಿ ಮೆರವಣಿಗೆ
  • ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ
ಬಾಗಲಕೋಟೆ: ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಚನಗಳು ಬದುಕಿನ ಆದರ್ಶ, ಗುರಿಗಳನ್ನು ತಿಳಿಸಿಕೊಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.
ನವನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶರಣರ ವಚನಗಳ ಅಧ್ಯಯನಮಾಡಿ ಸನ್ಮಾರ್ಗವನ್ನು ಅನುಸರಿಸು ಬಾಳ ಬೇಕಿದೆ. ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ಬರಲು ಸಾಧ್ಯವಾಗುತ್ತದೆ. ಶಿವಯೋಗಿಗಳು ಕಾಯಕದಲ್ಲಿ ನಿರತರಾಗಿ ಬದುಕು ಕಟ್ಟಿಕೊಂಡವರು. ಅವರು ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತೀಯತೆ, ಆಚಾರ-ವಿಚಾರ ಎಂಬ ಮನೋಭಾವ ಬಿಟ್ಟು ನಾವೆಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದವರು ಕಾಯಕ ಯೋಗಿ ಶಿವಯೋಗಿ ಸಿದ್ಧರಾಮೇಶ್ವರು. ಈ ನಾಡಿನ ಸಾಧು, ಸಂತರು, ಶರಣರು, ಮಹಾಪುರುಷರು ಒಗ್ಗಟ್ಟಿನ ಸಂದೇಶವನ್ನು ಸಾರಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವೆಲ್ಲರೂ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಕಾಯಕ ಯೋಗಿ, ಮಹಾ ಪುರುಷರನ್ನು ನಾವು ಒಂದೊಂದು ಸಮಾಜಕ್ಕೆ ಸೀಮಿತ ಮಾಡುತ್ತಿದ್ದೇವೆ. ಸಮಾಜ ವಿಭಜಿಸುವ ಕಾರ್ಯ ಮಾಡದೆ, ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುಕೊಳ್ಳುವ ಮೂಲಕ ಉತ್ತಮ ಸಾಮಾಜ ನಿರ್ಮಾಣ ಮಾಡುವ ಕಾರ್ಯ ಮಾಡಬೇಕಿದೆ ಎಂದರು.
ಸಮುದಾಯದ ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ಸಮಾಜದಲ್ಲಿರುವ ಅನಿಷ್ಠ ಪದ್ಧತಿಗಳನ್ನು ದೂರ ಮಾಡಿ, ಸಮಾಜಕ್ಕೆ ಸಂಸ್ಕಾರ ಕೊಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಟ್ಟು ಸಂಘಟಿತರಾಗಬೇಕೆಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿದರು. ಬಾದಾಮಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಹೆಗಡೆ ಉಪನ್ಯಾಸ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಅಕ್ಷಯ ಕಲ್ಲಕುಟಗರಗೆ 10,001 ರೂ. ನಗದು ನೀಡಿ ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕ ಎಸ್.ಎಂ. ಕಾಂಬಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸಮುದಾಯದ ಮುಖಂಡರಾದ ಲಕ್ಕಪ್ಪ ಬಂಡಿವಡ್ಡರ, ಯಲ್ಲಪ್ಪ ಕೋಟಿಕಲ್ಲ, ಯಮನಪ್ಪ ಕಲ್ಲಕುಟಗರ ಮತ್ತಿತರರು ಇದ್ದರು.

ಸಿದ್ಧರಾಮೇಶ್ವರರ ಭಾವಚಿತ್ರದ ಅದ್ದೂರಿ ಮೆರವಣಿಗೆ

ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಪೂರ್ಣಕುಂಭ ಹೊತ್ತ ಮಹಿಳೆಯರು ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net