ಸಾವರ್ಕರ್ ಜೀವನ ಆದರ್ಶಪ್ರಾಯ

ಜಮಖಂಡಿ ನಗರದ ಬಸವ ಭವನದ ಆವರಣದಲ್ಲಿ ನಡೆದ ವೀರ ಸಾವರ್ಕರ ಜಯಂತಿ ಕಾರ್ಯಕ್ರಮದಲ್ಲಿ ಮೂರಕ್ಕೂ ಹೆಚ್ಚು ಮಕ್ಕಳನ್ನು ಹೆತ್ತ ದಂಪತಿಗಳನ್ನು ಸಂಘಟಕರು ಸನ್ಮಾನಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ, ತಾತಾಸಾಹೇಬ ಬಾಂಗಿ, ಕೃಷ್ಣಾನಂದ ಅವಧೂತರು ಇದ್ದರು.
ಜಮಖಂಡಿ ನಗರದ ಬಸವ ಭವನದ ಆವರಣದಲ್ಲಿ ನಡೆದ ವೀರ ಸಾವರ್ಕರ ಜಯಂತಿ ಕಾರ್ಯಕ್ರಮದಲ್ಲಿ ಮೂರಕ್ಕೂ ಹೆಚ್ಚು ಮಕ್ಕಳನ್ನು ಹೆತ್ತ ದಂಪತಿಗಳನ್ನು ಸಂಘಟಕರು ಸನ್ಮಾನಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ, ತಾತಾಸಾಹೇಬ ಬಾಂಗಿ, ಕೃಷ್ಣಾನಂದ ಅವಧೂತರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿಕೆ
  • ವೀರ ಸಾವರ್ಕರ್ ಜಮಖಂಡಿಯಲ್ಲಿ ತಂಗಿದ್ದರು
ಜಮಖಂಡಿ: ಸ್ವಾತಂತ್ರ‍್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಅವರಿಗೂ ಮತ್ತು ಜಮಖಂಡಿ ನಗರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ನಗರದ ಬಸವ ಭವನದಲ್ಲಿ ಸ್ವಾತಂತ್ರ‍್ಯವೀರ ಸಾವರ್ಕರ್ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರ ಸಾವರ್ಕರ್ ಅವರ 143ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ಜಮಖಂಡಿಯಲ್ಲಿ ಸಾವರ್ಕರ್ ಅವರ ಇಬ್ಬರು ಸಹೋದರರು ಮೂರು ತಿಂಗಳ ಕಾಲ ವಾಸವಿದ್ದರು. ಸ್ವತಃ ವೀರ ಸಾವರ್ಕರ್ ಅವರು 15 ದಿನಗಳ ಕಾಲ ಇಲ್ಲಿ ತಂಗಿದ್ದರು. ಆ ಹಿನ್ನೆಲೆಯಲ್ಲಿ ವಿವಿಧ ಕಾರಣಗಳಿಂದಾಗಿ ಜಮಖಂಡಿ ಒಂದು ಪುಣ್ಯಭೂಮಿಯಾಗಿದೆ ಎಂದರು.
ಸಾವರ್ಕರ ಅವರ ಜೀವನವು ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ. ಆದರೆ ಕಾಂಗ್ರೆಸ್‌ನವರು ವೀರ ಸಾವರ್ಕರ್ ಅವರನ್ನು ವಿವಾದಿತ ವ್ಯಕ್ತಿ ಎನ್ನುವಂತೆ ಬಿಂಬಿಸಿದರು. ವೀರ ಸಾವರ್ಕರ್ ಹಾಗೂ ಅವರ ಸಹೋದರರು ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಸಂಸತ್, ವಿಧಾನ ಸೌಧ, ವಿಧಾನ ಪರಿಷತ್ ಎಂಬ ಹೆಸರುಗಳನ್ನು ನೀಡಿದ್ದೇ ಸಾವರ್ಕರ್. ದೇಶಕ್ಕೆ ಅಂದಾಜು 10 ಸಾವಿರ ಭಾರತೀಯ ಶಬ್ದಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.
ಸಾವರ್ಕರ್ ಅವರು ದೇಶದ ಮೊದಲ ರಾಜಕೀಯ ಖೈದಿಯಾಗಿದ್ದರು. ಅವರು ಹುಟ್ಟುಹಾಕಿದ್ದ ಅಭಿನವ ಭಾರತ ಸಂಘಟನೆಗೆ ಬ್ರಿಟಿಷರು ನಡುಗಿದ್ದರು. ದೇಶದಲ್ಲಿ ಶಸ್ತçಸಜ್ಜಿತ ದಂಗೆ ಮಾಡಿದ್ದು ನೇತಾಜಿ ಸುಭಾಷ ಚಂದ್ರ ಬೋಸ್ ಮತ್ತು ಸಾವರ್ಕರ್. ಆದರೆ ಕಾಂಗ್ರೆಸ್ ಇವರಿಬ್ಬರಿಗೂ ಮಾಡಿದ ಅನ್ಯಾಯಕ್ಕೆ ಕ್ಷಮೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸೈನ್ಯದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿತ್ತು. ಭಾರತ-ಪಾಕಿಸ್ತಾನ ಇಬ್ಬಾಗವಾದಾಗ ಸೈನ್ಯದಲ್ಲಿದ್ದ ಮುಸ್ಲಿಮರೆಲ್ಲರೂ ಪಾಕಿಸ್ತಾನದ ಸೈನ್ಯಕ್ಕೆ ಸೇರಿದರು. ಆದರೆ ಸಾವರ್ಕರ್ ಇದನ್ನು ಮೊದಲೇ ಅರಿತು, ಭಾರತೀಯ ಸೈನ್ಯಕ್ಕೆ ಹಿಂದೂಗಳನ್ನು ಸೇರ್ಪಡೆ ಮಾಡುವಲ್ಲಿ ಬಹಳಷ್ಟು ಪ್ರೇರಣೆ ನೀಡಿದ್ದರು. ಅಂದು ಸೈನ್ಯದಲ್ಲಿ ಹಿಂದೂಗಳು ಇದ್ದಿದ್ದರಿಂದಲೇ ಇಂದು ನಮ್ಮ ಆರ್ಮಿ ಉಳಿದಿದೆ. ಇಲ್ಲದಿದ್ದರೆ ಅಂದು ನಮ್ಮ ದೇಶಕ್ಕೆ ಸೈನ್ಯವೇ ಇರುತ್ತಿರಲಿಲ್ಲ. ಪ್ರಸ್ತುತ ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿಯುತ್ತಿದ್ದು, ಹಿಂದೂಗಳು ಮೂರಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದ್ದರಿಂದಲೇ ಪಾಕಿಸ್ತಾನ, ಬಾಂಗ್ಲಾದೇಶಗಳು ಉಂಟಾದವು. ಬೆಂಗಳೂರಿನ ಶಿವಾಜಿನಗರದಲ್ಲಿ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಲ್ಲಿ ಹಿಂದೂಗಳು ಯಾಕೆ ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಮತಾಂತರ ಎಂದರೆ ಅದು ರಾಷ್ಟ್ರಾಂತರ ಎಂದರ್ಥ. ಕಾಂಗ್ರೆಸ್‌ನವರು ಸಾವರ್ಕರ್ ಅವರನ್ನು ಹೇಗೆ ನಡೆಸಿಕೊಂಡರೋ, ಅಂಬೇಡ್ಕರ್ ಅವರಿಗೂ ಅದೇ ರೀತಿ ಮಾಡಿದರು ಎಂದು ಆರೋಪಿಸಿದರು.
ಹಿರಿಯ ನ್ಯಾಯವಾದಿ ತಾತಾಸಾಹೇಬ ಬಾಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರ ಸಾವರ್ಕರ ಅವರು ಜಮಖಂಡಿ ಜೊತೆ ಹೊಂದಿದ್ದ ಒಡನಾಟವನ್ನು ನೆನಪಿಸಿಕೊಂಡರು. ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶೈಲೇಶ ಆಪ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶೇಷವಾಗಿ ಮೂರಕ್ಕೂ ಹೆಚ್ಚು ಮಕ್ಕಳನ್ನು ಹೆತ್ತು ಬೆಳೆಸಿದ ತಾಲೂಕಿನ ವಿವಿಧ ದಂಪತಿಗಳನ್ನು ವೇದಿಕೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.
ಶಾಸಕರಾದ ನಾಡೋಜ ಜಗದೀಶ ಗುಡಗುಂಟಿ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶಿಲವಂತ, ಜಿ.ಎಸ್.ನ್ಯಾಮಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬಾಗಲಕೋಟೆ ವಿವಿ ಕುಲಪತಿ ಆನಂದ ದೇಶಪಾಂಡೆ, ಮುಖಂಡರಾದ ಉಮೇಶ ಮಹಾಬಳಶೆಟ್ಟಿ, ಆನಂದ್ ಇಂಗಳಗಾವಿ ಸೇರಿ ಇತರರಿದ್ದರು. ಶ್ರೀಕರ ಸವಾಯಿ ಪ್ರಾರ್ಥಿಸಿದರು, ಹರೀಶ್ ಪವಾರ್ ವಂದೇ ಮಾತರಂಗೀತೆ ಹಾಡಿದರು, ಮಚ್ಚೇಂದ್ರ ಮುಳಿಕ್ ವೈಯಕ್ತಿಕ ಗೀತೆ ಹೇಳಿದರು. ಅಜಯ ಕುಲಕರ್ಣಿ ಸ್ವಾಗತಿಸಿದರು, ಗಿರೀಶ ಮನಗೂಳಿ ನಿರೂಪಿಸಿದರು, ಕುಮಾರ ಹವಾಲ್ದಾರ ವಂದಿಸಿದರು.
"

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಸಾವರ್ಕರ ಯಾರು? ಎಂದು ಪ್ರಶ್ನಿಸಿದ್ದರು. ಅವರು ಅಧಿಕಾರದಿಂದ ಯಾವಾಗ ಇಳಿಯುತ್ತಾರೋ ಗೊತ್ತಿಲ್ಲ. ಆದರೆ ಮುಂದೆ ಸಿದ್ದರಾಮಯ್ಯ ಯಾರು? ಎಂದು ಜನರೇ ಕೇಳುತ್ತಾರೆ.

— | ಬಿ.ಎಲ್. ಸಂತೋಷ, ಬಿಜೆಪಿ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net