

ಬಾಗಲಕೋಟೆ: ಚುಣಾವಣೆ ಭಾಷಣ, ಭರವಸೆಗೆ ಸೀಮಿತವಾಗಿರುವ ಬಾಗಲಕೋಟೆ ನಡುಗಡ್ಡೆ ಪ್ರದೇಶದ ಮುಳುಗಡೆ ಸಮಸ್ಯೆಯಿಂದ ಬೇಸತ್ತಿರುವ ಸಂತ್ರಸ್ತರು ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಸದ್ಯ ಒಂದು ದಿನ ಸಾಂಕೇತಿಕವಾಗಿ ಪಾದಯಾತ್ರೆ ಹಾಗೂ ಧರಣಿ ನಡೆಸಿ, ದೀಪಾವಳಿ ಬಳಿಕ ೨೦೦೦ದಲ್ಲಿ ನಡೆದಿದ್ದ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಮಾದರಿಯಲ್ಲಿ ಹೋರಾಟ ರೂಪಿಸಲು ಹೋರಾಟ ಸಮಿತಿ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡರಾದ ಅಶೋಕ ಲಿಂಬಾವಳಿ, ಸಂಗಯ್ಯ ಸರಗಣಚಾರಿ, ಎ.ಎ.ದಂಡಿಯಾ ಅವರು, ನಡುಗಡ್ಡೆ ಪ್ರದೇಶದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ನವನಗರದ ಯುನಿಟ್-೧ ಮತ್ತು ೨ ರಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಅ. ೨೭ರಂದು ಬೃಹತ್ ಪಾದಯಾತ್ರೆ ಹಾಗೂ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಅಂದು ಬೆಳಗ್ಗೆ ೧೦ ಗಂಟೆಗೆ ನಗರದ ಕಿಲ್ಲಾ ಭಾಗದಲ್ಲಿರುವ ಅಂಬಾಭವಾನಿ ದೇವಸ್ಥಾನದಿಂದ ಆರಂಭಗೊಂಡು ಬಿಟಿಡಿಎ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದರು.
ನಗರದ ವಾರ್ಡ್ ನಂ.೧,೨,೩,೬, ೭ ಮತ್ತು ೯ ರ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಕಳೆದುಕೊಳ್ಳುವ ಹಾಗೂ ನಡುಗಡ್ಡೆಯಾಗುವ ಸುಮಾರು ೧೧೦೦ಕ್ಕೂ ಹೆಚ್ಚು ಕಟ್ಟಡಗಳ ಮಾಲೀಕರು ಮತ್ತು ಬಾಡಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಿನ್ನೀರಿನಿಂದಾಗಿ ಈ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ, ವಿಷಜಂತುಗಳ ಕಾಟ ಹಾಚ್ಚಾಗಿದೆ ಎಂದರು.
ರಸ್ತೆ ಸಂಪರ್ಕ ಕಡಿತ, ವಿದ್ಯುತ್ ಮತ್ತು ಕುಡಿಯುವ ನೀರಿನ ಅಭಾವ, ವ್ಯಾಪಾರ-ವಹಿವಾಟು ಸ್ತಬ್ಧವಾಗಿರುವುದು ಹಾಗೂ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ನಿವಾಸಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ ಎಂದು ವಿವರಿಸಿದರು.
ನಡುಗಡ್ಡೆ ಪ್ರದೇಶದ ಆಸ್ತಿಗಳಿಗೆ ಈಗಾಗಲೇ ಸರ್ವೇ ಆಗಿದೆ. ಇದೀಗ ಆ ಪ್ರದೇಶದಲ್ಲಿ ಮುಳುಗಡೆ ಎನ್ನುವ ಕಾರಣಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ನಿವಾಸಿಗಳಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಒಂದು ದಶಕದಿಂದ ಹೋರಾಟ ಮಾಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಮರೀಚಿಕೆ ಆಗಿಯೇ ಉಳಿದಿದೆ ಎಂದು ಕಿಡಿಕಾರಿದರು.
ನಡುಗಡ್ಡೆ ಪ್ರದೇಶದಲ್ಲಿರುವ ಕಟ್ಟಡಗಳ ಮಾಲೀಕರು ಹಾಗೂ ಬಾಡಿಗೆದಾರರಿಗೆ ಮೊದಲು ಪರ್ಯಾಯ ನಿವೇಶನಗಳನ್ನು ನೀಡಿ ಸ್ಥಳಾಂತರಿಸಬೇಕು. ಆ ನಂತರ ಸೂಕ್ತ ಪರಿಹಾರ ಧನವನ್ನು ವಿತರಿಸಬೇಕು. ಪುನರ್ವಸತಿ ಅಽಕಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ (ಬೆಂಗಳೂರು) ಸಲ್ಲಿಸಿರುವ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಬೇಕು. ಸ್ಥಳೀಯ ಶಾಸಕರಾದ ಉಮೇಶ ಮೇಟಿ, ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ, ಮುಖ್ಯಮಂತ್ರಿಯಾದ ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಇಲಾಖೆ ಸಚಿವ ಎನ್. ಚಲುವರಾಯಸ್ವಾಮಿ ಅವರು ಈ ಜ್ವಲಂತ ಸಮಸ್ಯೆಗೆ ತಕ್ಷಣವೇ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಯುನಿಟ್ ೧ ಮತ್ತು ೨ರಲ್ಲಿ ಸ್ವಚ್ಛತೆಯ ಕೊರತೆಯಿದ್ದು, ಕಸದ ರಾಶಿ ಹಾಗೂ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ನವನಗರ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಆವರಣದಲ್ಲಿ ಅವೈಜ್ಞಾನಿಕವಾಗಿ ಕಸ ಹಾಕಿ ಬೆಂಕಿ ಹಚ್ಚಲಾಗುತ್ತಿದ್ದು, ಸುತ್ತಮುತ್ತಲಿನ ಸಾರ್ವಜನಿಕರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ.
ಯುನಿಟ್-೨ರಲ್ಲಿ ವೈದ್ಯಕೀಯ ಸೌಲಭ್ಯ, ಪೊಲೀಸ್ ಠಾಣೆ, ಕುಡಿಯುವ ನೀರು, ಸಾರಿಗೆ ಬಸ್ ಸೌಕರ್ಯ, ರಸ್ತೆ ದೀಪ ಹಾಗೂ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜೊತೆಗೆ ಮುಳ್ಳು ಕಂಟಿಗಳು ಬೆಳೆದು ಕಳ್ಳತನ ಹಾಗೂ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಮಹಿಳೆಯರು ಮತ್ತು ಒಂಟಿ ನಿವಾಸಿಗಳು ಭಯದ ವಾತಾವರಣದಲ್ಲಿ ವಾಸಿಸುವಂತಾಗಿದೆ. ತಕ್ಷಣವೇ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಸಮಿತಿ ಮುಖಂಡರಾದ ಸದಾನಂದ ನಾರಾ, ಗುಂಡೂರಾವ ಶಿಂಧೆ, ರಾಜು ವಾಘ, ಸುರೇಶ ಮಜ್ಜಗಿ, ಶ್ರೀನಿವಾಸ ಸಜ್ಜನ ಮತ್ತಿತರರಿದ್ದರು.