ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ

ಮುಧೋಳ ನಗರದ ತಾ.ಪಂ ಸಭಾಭವನದಲ್ಲಿ ಶಾಸಕ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು. ಶ್ವೇತಾ ಬೀಡಿಕರ, ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಾಂತೇಶ ಮಾಚಕನೂರ, ಬಸವರಾಜ ಹುಗ್ಗಿ ಇತರರಿದ್ದರು.
ಮುಧೋಳ ನಗರದ ತಾ.ಪಂ ಸಭಾಭವನದಲ್ಲಿ ಶಾಸಕ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು. ಶ್ವೇತಾ ಬೀಡಿಕರ, ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಾಂತೇಶ ಮಾಚಕನೂರ, ಬಸವರಾಜ ಹುಗ್ಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕರ ಶಾಸಕ ಆರ್.ಬಿ. ತಿಮ್ಮಾಪೂರ ಕಟ್ಟುನಿಟ್ಟಿನ ಸೂಚನೆ
  • ಕೆಲಸದಲ್ಲಿ ನಿರ್ಲಕ್ಷ್ಯ ಸಲ್ಲ
  • ಕೆಡಿಪಿ ಸಭೆ
ಮುಧೋಳ: ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯವೈಖರಿ ಕುರಿತು ಶಾಸಕ ಆರ್.ಬಿ. ತಿಮ್ಮಾಪೂರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯ ಆರಂಭದಲ್ಲೇ ಬೆಳೆ ವಿಮೆ ಹೆಸರಿನಲ್ಲಿ ನಡೆದಿರುವ 30 ಕೋಟಿ ರೂ.ಗೂ ಅಽಕ ವಂಚನೆ ಪ್ರಕರಣವನ್ನು ಪ್ರಸ್ತಾಪಿಸಿದ ಶಾಸಕ, ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಮಾನ ಹರಾಜಾಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ತನಿಖೆಯ ಪ್ರಗತಿ ಕುರಿತು ಸಿಪಿಐ ಎಂ. ನಾಗರಡ್ಡಿ ಅವರನ್ನು ಪ್ರಶ್ನಿಸಿದರು. ಸಿಐಡಿ ತನಿಖೆ ನಡೆಯುತ್ತಿರುವುದಾಗಿ ಸಿಪಿಐ ತಿಳಿಸಿದರೂ, ವಂಚನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ತಾಕೀತು ಮಾಡಿದರು.
ಉಪವಿಭಾಗಾಕಾರಿ ಶ್ವೇತಾ ಬೀಡಿಕರ ಮಾತನಾಡಿ, ಪರಿಶೀಲನಾ ಹಂತದಲ್ಲಿನ ಲೋಪಗಳಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನಿಜವಾದ ರೈತರಿಗೆ ಮಾತ್ರ ಬೆಳೆ ವಿಮೆ ಸೌಲಭ್ಯ ದೊರೆಯುವಂತೆ ಜಾಗೃತಿ ಹಾಗೂ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಮರಡಿ ಗ್ರಾಮದ 42 ಪ್ರವಾಹ ಸಂತ್ರಸ್ತ ಕುಟುಂಬಗಳ ಸ್ಥಳಾಂತರ ಕುರಿತು ಚರ್ಚೆ ನಡೆಯಿತು. ಮಲ್ಲಾಪುರ ಪಿ.ಜೆ. ಗ್ರಾಮ ಹಾಗೂ ಮುಗಳಖೋಡ ಸಮೀಪದ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸುವ ಕುರಿತು ಅಽಕಾರಿಗಳು ಮಾಹಿತಿ ನೀಡಿದರು. ಸಂತ್ರಸ್ತರ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳುವಂತೆ ಶಾಸಕ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಡಿ.ಎಂ. ತೋಟದ ಮಾತನಾಡಿ, ಯಡಹಳ್ಳಿ, ಶಿರೋಳ, ಕನಸಗೇರಿ, ನಿಂಗಾಪುರ ಹಾಗೂ ಮುಗಳಖೋಡ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ತಿಳಿಸಿದರು. ನಾಗರಾಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲೂ ತಾಂತ್ರಿಕ ಅಡೆತಡೆಗಳಿರುವ ಬಗ್ಗೆ ವಿವರಿಸಿದರು. ಸಮಸ್ಯೆ ಶೀಘ್ರ ಪರಿಹರಿಸುವಂತೆ ಶಾಸಕ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಆಯುಕ್ತ ಗೋಪಾಲ ಕಾಸೆ ಮಾತನಾಡಿ, ಕೊಳಚೆ ಪ್ರದೇಶಗಳಲ್ಲಿ ನೀರಿನ ಮೂಲ ಇಲ್ಲದ ಕಾರಣ ನೀರಿನ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ತಿಮ್ಮಾಪೂರ, ಮೂರು ವರ್ಷದಲ್ಲಿ 142 ಎಕರೆ ವ್ಯಾಪ್ತಿಯಲ್ಲಿ 42 ಬಡಾವಣೆ ರೂಪುಗೊಂಡಿದೆ ಅವರಿಗೆ ಯಾವ ಆಧಾರದ ಮೇಲೆ ಅನುಮತಿ ನೀಡಿದ್ದೀರಿ ಎಂದು ಪ್ರಶ್ನಿಸಿದರು. ನಗರದಲ್ಲಿ ನೀರಿನ ಮೂಲಸೌಕರ್ಯವಿಲ್ಲದೆ ಹೊಸ ಬಡಾವಣೆಗಳಿಗೆ ಅನುಮತಿ ನೀಡುತ್ತಿರುವ ಕುರಿತು ಪ್ರಶ್ನಿಸಿದ ಶಾಸಕ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ನಗರದ ಕೆರೆಗೆ ನಿರಂತರ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಸಮಯಕ್ಕೆ ಲಭ್ಯವಿಲ್ಲ ಎಂಬ ದೂರುಗಳ ಕುರಿತು ಪಶು ಇಲಾಖೆ ಅಽಕಾರಿ ಗೋವಿಂದ ರಾಠೋಡ ಅವರನ್ನು ಎಚ್ಚರಿಸಿದ ಶಾಸಕ, ಸೇವೆಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಿದರು.
ಉಪವಿಭಾಗಾಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಎಸ್‌ಐಆರ್ ಕುರಿತು ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಾಂತೇಶ ಮಾಚಕನೂರ, ಕೆಡಿಪಿ ಸದಸ್ಯರಾದ ಬಸವರಾಜ ಹುಗ್ಗಿ ರೇಖಾ ತುಬಾಕೆ, ದುರ್ಗಪ್ಪ ಕಾಳಮ್ಮನ್ನವರ, ತಾಪಂ ಇಒ ರಾಘವೇಂದ್ರ ಕಳ್ಳಿಮನಿ, ಪೌರಾಯುಕ್ತ ಗೋಪಾಲ ಕಾಸೆ, ಬಿಇಒ ಸಮೀರ. ಮುಲ್ಲಾ, ಡಾ.ವೆಂಕಟೇಶ ಮಲಘಾಣ, ಅಶೋಕ ಹುಕಮನ್ನವರ, ಡಾ.ವಸಂತ ಮುದಿಗೌಡರ, ಅರಣ್ಯಾಕಾರಿಗಳಾದ ಎಚ್.ಆರ್. ಡೋಣಿ, ಪ್ರವೀಣ ಬಡ್ಡಿ, ಸಿಪಿಐ ಎಂ.ನಾಗರಡ್ಡಿ ಇತರರಿದ್ದರು.

ಲೋಕಾಯುಕ್ತಕ್ಕೆ ಮೊರೆ

ಪಶು ಚಿಕಿತ್ಸೆಗೆ ವೈದ್ಯರಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇರವಾಗಿ ಲೋಕಾಯುಕ್ತರನ್ನು ಸಂಪರ್ಕಿಸಿದ ಪ್ರಕರಣವನ್ನು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸಭೆಯ ಗಮನಕ್ಕೆ ತಂದರು. ಜನರಿಗೆ ನ್ಯಾಯ ಸಿಗದ ಪರಿಸ್ಥಿತಿ ಬರದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಎಚ್ಚರಿಸಿದರು.
"

ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸರ್ಕಾರದ ವೇತನಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರಿಯಾಗಿ ಕೆಲಸ ಮಾಡುವವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನಿರ್ಲಕ್ಷ್ಯ ತೋರಿದವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ.

— | ಆರ್.ಬಿ. ತಿಮ್ಮಾಪೂರ, ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net