ಮಹಾಲಿಂಗಪುರ: ಪಟ್ಟಣದ ರಬಕವಿ ರಸ್ತೆಗೆ ಹೊಂದಿಕೊಂಡಿರುವ ದಾನಮ್ಮದೇವಿ ನಗರದಲ್ಲಿ ಮೂಲ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ಸಮಗ್ರ ಅಭಿವೃದ್ಧಿಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ರಬಕವಿ-ಜಾಂಬೋಟ ರಾಜ್ಯ ಹೆದ್ದಾರಿಯಿಂದ ನಗರಕ್ಕೆ ಪ್ರವೇಶಿಸುವ ರಸ್ತೆ ಕೆಳಮಟ್ಟದಲ್ಲಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಮಳೆ ಬಂದಾಗ ನೀರು ನಿಲ್ಲುವ ಸಮಸ್ಯೆಯಿಂದ ರಸ್ತೆ ಹೊಂಡದಂತೆ ಕಾಣುತ್ತಿದ್ದು, ಸಂಚಾರ ದುಸ್ತರವಾಗಿದೆ. ಚನ್ನಮ್ಮ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಆಗುವ ಸಂದರ್ಭಗಳಲ್ಲಿ ಗೋಕಾಕ ರಸ್ತೆ ಸಂಪರ್ಕಕ್ಕೆ ಈ ಮಾರ್ಗ ಪ್ರಮುಖವಾದರೂ, ಅದರ ದುಸ್ಥಿತಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ.
ಇನ್ನೊಂದೆಡೆ, ಉದ್ಯಾನವನಗಳು ನಿರ್ಲಕ್ಷ್ಯಕ್ಕೊಳಗಾಗಿ ಮುಳ್ಳು-ಕಂಟಿಗಳಿಂದ ತುಂಬಿದ್ದು, ಸಾರ್ವಜನಿಕರಿಗೆ ಉಪಯೋಗವಿಲ್ಲದಂತಾಗಿವೆ. ಗಟಾರಗಳ ಸುತ್ತಮುತ್ತ ಹುಲ್ಲು-ಪೊದೆಗಳು ಬೆಳೆಯುವುದರಿಂದ ಅಶುಚಿ ಪರಿಸ್ಥಿತಿ ಉಂಟಾಗಿ, ವಿಷಜಂತುಗಳ ಸಂಚಾರಕ್ಕೂ ಅವಕಾಶ ಸಿಕ್ಕಿದೆ.
ರಸ್ತೆ ದುರಸ್ತಿ, ಉದ್ಯಾನವನ ಸ್ವಚ್ಛತೆ, ಗಟಾರಗಳ ಶುದ್ಧೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
"
ನಮ್ಮ ಮನೆ ಹತ್ತಿರ ಇರುವ ಗಟಾರಗಳಲ್ಲಿ ಹುಲ್ಲು-ಪೊದೆ ಹಾಗೂ ಗಿಡಗಂಟಿ ಬೆಳೆದಿದ್ದರಿಂದ ಇಲ್ಲಿ ಹಾವುಗಳು ಹರಿದಾಡುತ್ತಿರುತ್ತವೆ. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಸಂಬಂಧಿಸಿದವರು ಕೂಡಲೇ ಸ್ವಚ್ಛತೆ ಕ್ರಮ ಕೈಗೊಳ್ಳಬೇಕು.