ಜಾಲಿಬೇರಿ ಬಳಿ ರೈಲ್ವೆ ಸೇತುವೆ ಅಗತ್ಯ

ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅಧ್ಯಕ್ಷತೆಯಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ರೈತರ ಸಭೆ ನಡೆಯಿತು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಅಶೋಕ ತೇಲಿ ಇದ್ದರು.
ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅಧ್ಯಕ್ಷತೆಯಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ರೈತರ ಸಭೆ ನಡೆಯಿತು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಅಶೋಕ ತೇಲಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಗದ್ದಿಗೌಡರ ಹೇಳಿಕೆ
  • ರೈಲ್ವೆ ಅಧಿಕಾರಿಗಳ ಜತೆ ಸಭೆ
  • ರೈತರ ಹಿತಾಸಕ್ತಿಗೆ ಪ್ರಾಧಾನ್ಯತೆ
ಬಾಗಲಕೋಟೆ: ಮುಧೋಳ ತಾಲೂಕಿನ ಜಾಲಿಬೇರಿ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ರೈಲ್ವೆ ಸೇತುವೆ ನಿರ್ಮಾಣ ಮಾಡುವ ಅಗತ್ಯ ಇದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ರೈಲ್ವೆ ಅಧಿಕಾರಿಗಳು ಮತ್ತು ರೈತರ ಜೊತೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗಲಕೋಟೆ- ಕುಡಚಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಜಾಲಿಬೇರಿ ಭಾಗದಲ್ಲಿ ಘಟಪ್ರಭಾ ನದಿಗೆ ರೈಲು ಸೇತುವೆ ನಿರ್ಮಾಣ ಆಗಬೇಕಿದ್ದು, ವೈಜ್ಞಾನಿಕವಾಗಿ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಅದೇ ಸಮಯದಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಂಡರೆ ರೈಲು ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ಉತ್ತೇಜನ ದೊರೆಯಲಿದೆ. ಆದ್ದರಿಂದ ಕಾಮಗಾರಿಯ ಪ್ರತಿಯೊಂದು ಹಂತವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಬೇಕು. ರೈತರು ಸಲ್ಲಿಸಿರುವ ನ್ಯಾಯ ಸಮ್ಮತ ಬೇಡಿಕೆಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಘಟಪ್ರಭಾ ನದಿಯಿಂದ ಉಂಟಾಗುವ ಪ್ರವಾಹವನ್ನು ಆಧರಿಸಿ ಸೇತುವೆ ನಿರ್ಮಾಣ ಕುರಿತು ಯೋಜನೆ ಸಿದ್ಧಪಡಿಸಬೇಕು. ಪ್ರವಾಹ ಬಂದಾಗ ರೈತರ ಜಮೀನುಗಳಿಗೆ ನೀರು ಹೋಗದ ರೀತಿಯಲ್ಲಿ ವೈಜ್ಞಾನಿಕವಾಗಿ ಸೇತುವ ನಿರ್ಮಿಸುವ ನಿಟ್ಟಿನಲ್ಲಿ ಕೆಬಿಜೆಎನ್‌ಎಲ್, ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಜಂಟಿ ಸ್ಥಳ ಪರಿಶೀಲಿಸಿ, ನೀರಿನ ಹರಿವು ನೋಡಿಕೊಂಡು ಯೋಜನೆ ರೂಪಿಸಬೇಕು ಎಂದು ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಭಾರತೀಯ ರೈಲ್ವೆ ಇಲಾಖೆಯ ಡೆಪ್ಯೂಟಿ ಸಿಇ ಶಿವುಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ನಾಯಕ, ಆಡಳಿತಾಧಿಕಾರಿ ಉಮೇಶ ನಾಯಕ, ಎಡಿಎಲ್‌ಆರ್ ಮಹೇಶ ಪತ್ತಾರ ಸೇರಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net