ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ

ಬಾಗಲಕೋಟೆ ನವನಗರದ ಮನೆ ಮನೆಗೆ ಸ್ವಚ್ಛತಾ ಜಾಗೃತಿ ಕರಪತ್ರ ಹಂಚುತ್ತಿರುವ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಬಿಟಿಡಿಎ ಅಧಿಕಾರಿಗಳು.
ಬಾಗಲಕೋಟೆ ನವನಗರದ ಮನೆ ಮನೆಗೆ ಸ್ವಚ್ಛತಾ ಜಾಗೃತಿ ಕರಪತ್ರ ಹಂಚುತ್ತಿರುವ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಬಿಟಿಡಿಎ ಅಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಬಿಟಿಡಿಎ ಅಧ್ಯಕ್ಷ ತಪಶೆಟ್ಟಿ ಮನವಿ
  • ವಿಶ್ವ ಪರಿಸರ ದಿನಾಚರಣೆಗೆ ಚಾಲನೆ
  • ಕರಪತ್ರ ಹಂಚಿಕೆ
  • ಪ್ರತಿಯೊಂದು ಸೆಕ್ಟರ್‌ನಲ್ಲೂ ಕಾರ್ಯ
  • ನವನಗರದಲ್ಲಿ 20 ದಿನಗಳ ಅಭಿಯಾನ
ಬಾಗಲಕೋಟೆ: ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ನಮ್ಮ ಸುತ್ತಲಿನ ಪರಿಸರವನ್ನು ನಾವೇ ಹದಗೆಡಿಸಿ, ಆರೋಗ್ಯಕ್ಕಾಗಿ ಪರದಾಡುವುದು ಬೇಡ. ಇನ್ನು ಮಳೆಗಾಲ ಆರಂಭಗೊಳ್ಳುತ್ತಿದ್ದು, ನಾಗರಿಕರು, ತಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕಾರ ನೀಡಬೇಕು ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ ಮಾಡಿದರು.
ನಗರದಲ್ಲಿ ಬಿಟಿಡಿಎದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 20 ದಿನಗಳ ಸ್ವಚ್ಛತಾ ಅಭಿಯಾನದ ವೇಳೆ ಸೆಕ್ಟರ್ ನಂ.34ರಲ್ಲಿ ನಾಗರಿಕರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವನಗರದ ಜನತೆಗೆ ಸ್ವಚ್ಛತೆ, ಕುಡಿಯುವ ನೀರು, ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಬಿಟಿಡಿಎ ತನ್ನದೇ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದೆ. ಪ್ರತಿಯೊಂದು ಸೆಕ್ಟರ್‌ಗಳಲ್ಲೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಬಿಟಿಡಿಎ ಅಧಿಕಾರಿಗಳು, ಸ್ವಚ್ಛತೆ ಜವಾಬ್ದಾರಿ ಹೊತ್ತ ಗುತ್ತೆಗೆದಾರರು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರ ಸಹಕಾರ ಮುಖ್ಯವಾಗಿದೆ ಎಂದರು.

ಕಚೇರಿಗೆ ನೇರವಾಗಿ ಭೇಟಿ ಮಾಡಿ

ನಾನು ಪ್ರತಿದಿನ ಬಿಟಿಡಿಎ ಅಧ್ಯಕ್ಷರ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ಸಂತ್ರಸ್ತರು ತಮ್ಮ ಯಾವುದೇ ಸಮಸ್ಯೆ ಇದ್ದರೂ, ನೇರವಾಗಿ ಭೇಟಿ ಮಾಡಬೇಕು. ಬಿಟಿಡಿಎ ಪುರ್ನವಸತಿ ಕಚೇರಿಯಲ್ಲಿ ಇ-ಸ್ವತ್ತು ಸಮಸ್ಯೆ ಬಹಳ ದಿನಗಳಿಂದ ಇತ್ತು. ಅದನ್ನು ಬಹುತೇಕ ಬಗೆಹರಿಸಲಾಗಿದೆ. ಈವರೆಗೆ ಬಾಕಿ ಇದ್ದ ಎಲ್ಲ ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಇ-ಸ್ವತ್ತು ದಾಖಲೆ ಪರಿಶೀಲಿಸಿ, ಉತಾರ ನೀಡಲು ಸಮಯಾವಕಾಶ ಬೇಕಾಗುತ್ತದೆ. ಇದಕ್ಕೆ ಸಂತ್ರಸ್ತರೂ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಬಿಟಿಡಿಎದಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ, ಪ್ರತಿ ಸೆಕ್ಟರ್‌ನಲ್ಲೂ ನಡೆದಿದೆ. ಇದಕ್ಕೆ ನಾಗರಿಕರೂ ಸ್ಪಂದನೆ ನೀಡುತ್ತಿದ್ದಾರೆ. ಬಿಟಿಡಿಎ ವಿಭಾಗ-2ರಿಂದ ನಾಗರಿಕರು ಹಸಿ ಕಸ, ಒಣ ಕಸ ಬೇರ್ಪಡಿ ಹೇಗೆ ನೀಡಬೇಕು, ಸ್ವಚ್ಛತೆ ಇಲ್ಲದಿದ್ದರೆ ಆಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಪ್ರತಿಯೊಂದು ಮನೆಗೂ ಹಂಚಲಾಗಿದೆ. ಓದಿ, ಸುಮ್ಮನೇ ಬೀಸಾಕದೇ ಅವುಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಬಿಟಿಡಿಎ ವಿಭಾಗ-2ರ ಕಾರ್ಯನಿರ್ವಾಹಕ ಇಂಜಿನಿಯರ್ ವೈ.ಬಿ. ಪಾತ್ರೋಟಿ, ಅಧಿಕಾರಿಗಳಾದ ಸುರೇಶ ತೆಗ್ಗಿ, ಶ್ರೀಕಾಂತ ಹಿರೇಗೌಡರ, ರವಿ ಅಂತರಗೊಂಡ, ಹಾಲವರ, ಸ್ಥಳೀಯರಾದ ವಕೀಲ ರಮೇಶ ಹೂಗಾರ, ನೂರಂದಪ್ಪ ಮುಂಡೇವಾಡಿ, ಮುತ್ತಣ್ಣ ಕಟ್ಟಿಮನಿ, ಹೀರಾಲಾ ಅಷ್ಟಕರ, ಶಂಕರ ಮಗಜಿ ಮತ್ತಿತರರಿದ್ದರು.
"

ನವನಗರದಲ್ಲಿ ಸ್ವಚ್ಛತೆ ಬಗ್ಗೆ ಬಹಳಷ್ಟು ಆರೋಪ ಕೇಳಿ ಬಂದಿದ್ದವು. ಹೀಗಾಗಿ ನಾನು ಅಧಿಕಾರ ವಹಿಸಿಕೊಂಡ ಬಳಿಕ, ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಬಿಟಿಡಿಎ ವಿಭಾಗ-1 ಮತ್ತು 2ರಿಂದ ಸ್ವಚ್ಛತಾ ಸಪ್ತಾಹ ನಡೆಸಿದ್ದೇವೆ. ಒಟ್ಟು 20 ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಏಕಕಾಲಕ್ಕೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

— -ಪ್ರಕಾಶ ತಪಶೆಟ್ಟಿ, ಅಧ್ಯಕ್ಷರು, ಬಿಟಿಡಿಎ, ಬಾಗಲಕೋಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net