ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗಿರುವ ತೀವ್ರ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ಸಂಪೂರ್ಣ ಅಸ್ತವ್ಯಸ್ತ
ರಬಕವಿ/ಬನಹಟ್ಟಿ : ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗಿರುವ ತೀವ್ರ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ದವಸ ಧಾನ್ಯಕ್ಕಾಗಿ ಬಿಸಿಲಿನಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಸರ್ವರ್ ಕೈಕೊಡುತ್ತಿರುವ ಹಿನ್ನೆಲೆ ಆಕ್ರೋಶಗೊಂಡ ನ್ಯಾಯಬೆಲೆ ಅಂಗಡಿಕಾರರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ನೀಡಿ ಸರಿಪಡಿಸಲು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶೇಖರ ಅಂಗಡಿ ಮಾತನಾಡಿ, ತಿಂಗಳ ಆರಂಭದಿಂದಲೇ ಸರ್ವರ್ ಸಮಸ್ಯೆ ತೀವ್ರವಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸರಿಯಾಗಿ ನಡೆಯುತ್ತಿಲ್ಲ. ಜನರು ಬೆಳಗ್ಗೆಯಿಂದ ಸಂಜೆವರೆಗೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತರೂ ಅಕ್ಕಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ನಮ್ಮ ಮೇಲೆಯೇ ಆಕ್ರೋಶ ಹೊರ ಹಾಕುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಒಬ್ಬ ಲಾನುಭವಿಯಿಂದ ಎರಡು ಬಾರಿ ಥಂಬ್ ಪಡೆಯುವ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಸಮಯ ವ್ಯರ್ಥವಾಗುತ್ತಿದೆ. ಒಂದು ಬಾರಿ ಥಂಬ್ ಬರುವುದೇ ಕಷ್ಟವಾಗಿರುವಾಗ ಎರಡು ಬಾರಿ ಪಡೆಯುವುದು ಅಸಾಧ್ಯವಾಗುತ್ತಿದೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಕಾರ್ಮಿಕರು ಗಂಟೆಗಟ್ಟಲೆ ಕಾಯುವಂತಾಗಿದೆಯೆಂದು ದೂರಿದರು.
ಮುಂದಿನ ತಿಂಗಳಿಂದ ಲಾನುಭವಿಗಳಿಂದ ಕೇವಲ ಒಂದೇ ಬಾರಿ ಥಂಬ್ ಪಡೆಯುವ ವ್ಯವಸ್ಥೆ ಜಾರಿಗೊಳಿಸಬೇಕು. ಜೊತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ತಾಂತ್ರಿಕ ಸಮಸ್ಯೆ ನಿವಾರಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಅಂಗಡಿಕಾರರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಸರ್ವರ್ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.