ಹುನಗುಂದದಲ್ಲಿ ಖಾಸಗಿ ಬೆಳೆ ಸಮೀಕ್ಷೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದ ಬೆಳೆ ಸಮೀಕ್ಷೆದಾರರು. ಸಂಘದ ಅಧ್ಯಕ್ಷ ಬೊಮ್ಮೇಶ ಹುಗ್ಗಿ, ಪ್ರಭು ಬಡಕಣ್ಣವರ, ಗಂಗಾಧರ ಬಡಿಗೇರ, ಮುತ್ತಪ್ಪ ದೊಡ್ಡಿಮನಿ ಮತ್ತಿತರಿದ್ದರು.
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಖಾಸಗಿ ಬೆಳೆ ಸಮೀಕ್ಷೆದಾರರ (ಪಿಆರ್) ವಿವಿಧ ಸಮಸ್ಯೆಗಳನ್ನು ಪರಿಹರಿಸಿ
ಬೆಳೆ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆಸಲು ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು.
ಹುನಗುಂದ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಖಾಸಗಿ ಬೆಳೆ ಸಮೀಕ್ಷೆದಾರರ (ಪಿಆರ್) ವಿವಿಧ ಸಮಸ್ಯೆಗಳನ್ನು ಪರಿಹರಿಸಿ, ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ಬೆಳೆ ಸಮೀಕ್ಷೆದಾರರು ಮಂಗಳವಾರ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬೊಮ್ಮೇಶ ಹುಗ್ಗಿ ಮಾತನಾಡಿ, ಬೆಳೆ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆಸಲು ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು. ಕಾರ್ಯಕ್ಕೆ ತಕ್ಕಂತೆ ಗೌರವಧನ ನಿಗದಿಪಡಿಸಿ, ಬಾಕಿ ಇರುವ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಗ್ರಾಮ ಮಟ್ಟದಲ್ಲಿ ಎದುರಾಗುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರಭು ಬಡಕಣ್ಣವರ ಮಾತನಾಡಿ, ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ನಲ್ಲಿರುವ ತಾಂತ್ರಿಕ ದೋಷಗಳನ್ನು ಶೀಘ್ರ ಸರಿಪಡಿಸಿ, ಕಾರ್ಯಾವಧಿಯನ್ನು ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ವಿಸ್ತರಿಸಬೇಕು. ಸಮೀಕ್ಷೆ ಕಾರ್ಯಕ್ಕೆ ರೈತರು ಹಾಗೂ ಅಧಿಕಾರಿಗಳಿಂದ ಅಗತ್ಯ ಸಹಕಾರ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮೀಕ್ಷೆ ವೇಳೆ ಪ್ರಾಣಿ, ಕೀಟಗಳ ದಾಳಿಯಿಂದ ಅಪಾಯ ಸಂಭವಿಸಿದರೆ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಸಮೀಕ್ಷೆದಾರರಿಗೆ 10 ಲಕ್ಷ ರೂ.ಜೀವ ವಿಮೆ, ಸೇವಾ ಭದ್ರತೆ, ಪ್ಲಾಟ್ ಸಮೀಕ್ಷೆಯ ಪ್ರೋತ್ಸಾಹಧನ ಹೆಚ್ಚಳ, ವರ್ಷಪೂರ್ತಿ ಉದ್ಯೋಗ ಅಥವಾ ಮಾಸಿಕ ಸಹಾಯಧನ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಗಂಗಾಧರ ಬಡಿಗೇರ, ಮುತ್ತಪ್ಪ ದೊಡ್ಡಿಮನಿ, ಸಂಗಣ್ಣ ಹುಬ್ಬಳ್ಳಿ, ಶಾಂತಪ್ಪ ಹಾಲಕೇರಿ ಸೇರಿ ಹಲವರು ಉಪಸ್ಥಿತರಿದ್ದರು.