ಛಾಯಾಗ್ರಾಹಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ರಬಕವಿ-ಬನಹಟ್ಟಿ ಛಾಯಾಗ್ರಾಹಕರ ಸಂಘದ ಉದ್ಘಾಟನಾ ಸಮಾರಂಭ ಜರುಗಿತು. ಶಂಕರ ಗುರೂಜಿ, ವಿಠ್ಠಲ ಹಿರೇಮಠ, ಜಗದೀಶ ಅಂಬಿಗೇರ, ಹಾಸೀಮಸಾಬ ಜಮಖಂಡಿ ಇದ್ದರು.
ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ರಬಕವಿ-ಬನಹಟ್ಟಿ ಛಾಯಾಗ್ರಾಹಕರ ಸಂಘದ ಉದ್ಘಾಟನಾ ಸಮಾರಂಭ ಜರುಗಿತು. ಶಂಕರ ಗುರೂಜಿ, ವಿಠ್ಠಲ ಹಿರೇಮಠ, ಜಗದೀಶ ಅಂಬಿಗೇರ, ಹಾಸೀಮಸಾಬ ಜಮಖಂಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಆಗ್ರಹ
  • ಹೊಸ ತಂತ್ರಜ್ಞಾನ, ಕೌಶಲ ಅಳವಡಿಸಿಕೊಳ್ಳಿ
  • ಛಾಯಾಗ್ರಹಣವು ಕೇವಲ ಚಿತ್ರ ಸೆರೆಹಿಡಿಯುವ ವತ್ತಿಯಲ್ಲ. ಸಮಾಜದ ಪ್ರಮುಖ ಘಟನೆಗಳು, ಸಂಸ್ಕೃತಿ, ಸಂಭ್ರಮ ಹಾಗೂ ನೋವಿನ ಕ್ಷಣಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವ ಮಹತ್ವದ ಜವಾಬ್ದಾರಿ ಛಾಯಾಗ್ರಾಹಕರ ಮೇಲಿದೆ.
ರಬಕವಿ-ಬನಹಟ್ಟಿ :

ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ಸೌಲಭ್ಯ ಹಾಗೂ ವತ್ತಿಪರ ರಕ್ಷಣೆ ಸೇರಿ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಆಗ್ರಹಿಸಿದರು.

ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಬಕವಿ-ಬನಹಟ್ಟಿ ಛಾಯಾಗ್ರಾಹಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರು ಹಗಲಿರುಳು ದುಡಿಯುತ್ತಿದ್ದರೂ ವತ್ತಿಗೆ ಸಂಬಂಧಿಸಿದ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಹೇಳಿದರು.
ಛಾಯಾಗ್ರಹಣವು ಕೇವಲ ಚಿತ್ರ ಸೆರೆಹಿಡಿಯುವ ವತ್ತಿಯಲ್ಲ. ಸಮಾಜದ ಪ್ರಮುಖ ಘಟನೆಗಳು, ಸಂಸ್ಕೃತಿ, ಸಂಭ್ರಮ ಹಾಗೂ ನೋವಿನ ಕ್ಷಣಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವ ಮಹತ್ವದ ಜವಾಬ್ದಾರಿ ಛಾಯಾಗ್ರಾಹಕರ ಮೇಲಿದೆ. ಹೀಗಾಗಿ ಅವರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುವುದರೊಂದಿಗೆ ಸರ್ಕಾರದಿಂದ ವಿಶೇಷ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದರು.
ತಂತ್ರಜ್ಞಾನ ಕ್ಷೇತ್ರದಲ್ಲಿನ ವೇಗದ ಬದಲಾವಣೆಗಳಿಂದ ಛಾಯಾಗ್ರಹಣ ವತ್ತಿಯಲ್ಲೂ ಸ್ಪರ್ಧೆ ಹೆಚ್ಚಾಗಿದೆ. ವತ್ತಿಪರರು ಹೊಸ ತಂತ್ರಜ್ಞಾನ ಹಾಗೂ ಕೌಶಲಗಳನ್ನು ನಿರಂತರವಾಗಿ ಅಳವಡಿಸಿಕೊಂಡು ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾವಲಗಿ ಜ್ಯೋತಿಷಿ ಶಂಕರ ಗುರೂಜಿ, ವಿಠ್ಠಲ ಹಿರೇಮಠ, ಜಗದೀಶ ಅಂಬಿಗೇರ, ಹಾಸೀಮಸಾಬ ಜಮಖಂಡಿ ಸೇರಿ ಸಂಘದ ಸದಸ್ಯರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ

ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರುದ್ರಪ್ಪ ಯಡಹಳ್ಳಿ, ಉಪಾಧ್ಯಕ್ಷರಾಗಿ ಶಿವಪುತ್ರ ಭಜಂತ್ರಿ, ಕಾರ್ಯದರ್ಶಿಯಾಗಿ ಪ್ರವೀಣ ಜಯಣ್ಣವರ, ಖಜಾಂಚಿಯಾಗಿ ಡಾ. ಶಿವಪ್ರಕಾಶ ತುಕ್ಕಣ್ಣವರ ಹಾಗೂ ಸಹ ಕಾರ್ಯದರ್ಶಿಯಾಗಿ ರಾಜು ಪಿಟಗಿ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net