ಲೋಕಾಪುರ ಪಟ್ಟಣದಲ್ಲಿ ಸ್ವಯಂ ಗಣತಿ ಜಾಗೃತಿ ಬೈಕ್ ರ‍್ಯಾಲಿಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಬಣ್ಣ ಪೂಜೇರ ಚಾಲನೆ ನೀಡಿದರು. ಆಕಾಶ ರಾಯಣ್ಣವರ, ಆಕಾಶ ರಾಯಣ್ಣವರ, ಸಂತೋಷ ಸಿರಿನಾಳ, ರಾಘವೇಂದ್ರ ಮುರಗೋಡ ಇತರರು ಉಪಸ್ಥಿತರಿದ್ದರು.
ಲೋಕಾಪುರ: 2027ರ ಜನಗಣತಿಯನ್ನು ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಸಾರ್ವಜನಿಕರಿಗೆ ಸ್ವಯಂ ಗಣತಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಬಣ್ಣ ಪೂಜೇರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಗಣತಿ ಜಾಗೃತಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರಿಕರು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಪೋರ್ಟಲ್‌ಗೆ ಲಾಗಿನ್ ಆಗಿ 33 ಸರಳ ಪ್ರಶ್ನೆಗಳಿಗೆ ಉತ್ತರ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಬಹುದು. ವಿವರಗಳನ್ನು ದಾಖಲಿಸಿದ ನಂತರ ಸೃಷ್ಟಿಯಾಗುವ ಎಸ್‌ಇ ಐಡಿಯನ್ನು ಸಂರಕ್ಷಿಸಿ, ನಂತರ ಮನೆಗೆ ಬರುವ ಗಣತಿದಾರರಿಗೆ ನೀಡಬೇಕು ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಆಕಾಶ ರಾಯಣ್ಣವರ ಮಾತನಾಡಿ, ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತವಾಗಿ ಏ. 1ರಿಂದ 15ರವರೆಗೆ ಸ್ವಯಂ ಗಣತಿ ನಡೆಯಲಿದೆ. ನಂತರ ಏ. 16ರಿಂದ ಮೇ 15ರವರೆಗೆ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯ ನಡೆಯಲಿದೆ. ಈ ಕಾರ್ಯವನ್ನು ಮೊಬೈಲ್ ಆಪ್ ಹಾಗೂ ವೆಬ್ ಪೋರ್ಟಲ್ ಮೂಲಕ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬಸವೇಶ್ವರ ವೃತ್ತದಿಂದ ಆರಂಭವಾದ ಜಾಗೃತಿ ಬೈಕ್ ರ‍್ಯಾಲಿ ಮೇನ್ ಬಜಾರ್, ಹೂಗಾರ ಗಲ್ಲಿ, ಬ್ರಾಹ್ಮಣ ಗಲ್ಲಿ, ಬಡಿಗೇರ ಓಣಿ, ದೇಸಾಯಿ ವಾಡೆ, ಜನತಾ ಪ್ಲಾಟ್, ಶಿವಾಜಿ ವೃತ್ತ, ಜ್ಞಾನೇಶ್ವರ ಮಠ, ಸುಭಾಸನಗರ, ವೆಂಕಟಾಪುರ ಸೇರಿ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜನಗಣತಿ ಬಗ್ಗೆ ಅರಿವು ಮೂಡಿಸಿತು.
ಪ್ರಥಮ ದರ್ಜೆ ಸಹಾಯಕ ಸಂತೋಷ ಸಿರಿನಾಳ, ಆರೋಗ್ಯ ನಿರೀಕ್ಷಕಿ ಭಾಗ್ಯಾಶ್ರೀ ಪಾಟೀಲ, ಸಿಆರ್‌ಪಿ ಕೃಷ್ಣಾ ಮಾಳೇದ, ರಾಘವೇಂದ್ರ ಮುರಗೋಡ, ವಿಠ್ಠಲ ಗಸ್ತಿ, ಶಂಕರಗೌಡ ಪಾಟೀಲ, ಹೃತ್ತಿಕ ಮೋಮಿನ್, ಶಬ್ಬೀರ ಕರ್ನಾಚಿ, ಅಶೋಕ ಕಾಳಮ್ಮನವರ, ಕಾವೇರಿ ಪಾಟೀಲ ಸೇರಿ ಪಟ್ಟಣ ಪಂಚಾಯತ್ ಸಿಬ್ಬಂದಿ ಪಾಲ್ಗೊಂಡಿದ್ದರು.