ಮಹಾಲಿಂಗಪುರ : ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಕವಿಪ್ರನಿನಿ ಅಧಿಕಾರಿಗಳ ಹಾಗೂ ನೌಕರರ ಒಕ್ಕೂಟ ವತಿಯಿಂದ ಬುಧವಾರ ಮಹಾಲಿಂಗಪುರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಪಟ್ಟಣದ ಹೆಸ್ಕಾಂ ಉಪ ವಿಭಾಗ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಟಾಟಾ ಪವರ್ ಸೇರಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಕ್ರಮವನ್ನು ತೀವ್ರವಾಗಿ ವಿರೋಽಸಿದರು. ಖಾಸಗೀಕರಣದಿಂದ ರೈತರು ಹಾಗೂ ಸಾಮಾನ್ಯ ಜನರಿಗೆ ವಿದ್ಯುತ್ ದರ ಏರಿಕೆ ಹೊರೆ ಬೀಳುವ ಸಾಧ್ಯತೆ ಇದ್ದು, ಇದು ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿದ್ಯುತ್ ವಿತರಣಾ ಹಕ್ಕಿಗಾಗಿ ಟಾಟಾ ಪವರ್ ಕಂಪನಿ ಕೆಇಆರ್‌ಸಿಗೆ ಸಲ್ಲಿಸಿರುವ ಮನವಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ಒತ್ತಾಯಿಸಿದರು.
ಹೆಸ್ಕಾಂ ಸಂಸ್ಥೆ ಲಕ್ಷಾಂತರ ರೈತರಿಗೆ ವಿದ್ಯುತ್ ಪೂರೈಸುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಇಂತಹ ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಿದರೆ ಸಬ್ಸಿಡಿ ಸೇರಿ ಹಲವಾರು ಸೌಲಭ್ಯಗಳಿಗೆ ಧಕ್ಕೆಯಾಗುವ ಭೀತಿ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿ.ಎನ್. ಮರಕಟ್ಟಿ, ಶಾಖಾಧಿಕಾರಿ ರಾಜೇಶ ಬಾಗೋಜಿ, ಶಿವರಾಜ ಸಜ್ಜನ, ರಂಗನಾಥ ಎಚ್.ಆರ್., ಮಂಜುನಾಥ, ಮಹೇಶ ಮಡಿವಾಳ ಸೇರಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.