

ಹುನಗುಂದ: ಮುಂಗಾರು ಹಾಗೂ ಹಿಂಗಾರು ಮಳೆ ಸಮರ್ಪಕವಾಗಿ ಸುರಿಯದೆ ಅನ್ನದಾತರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದ ರೈತರೊಬ್ಬರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಮೆಣಸಿನಕಾಯಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ಬಿಸಲದಿನ್ನಿ ಗ್ರಾಮದ ಪ್ರಗತಿಪರ ರೈತ ಮಹಾಂತೇಶ ಚಂದ್ರಪ್ಪ ಹಿರೇಗೌಡರ ತಮ್ಮ ಜಮೀನಿನಲ್ಲಿ ಮೆಣಸಿನಕಾಯಿ ನಾಟಿ ಮಾಡಿದ್ದಾರೆ. ಸಕಾಲಕ್ಕೆ ಮಳೆಯಾಗದೆ ಬೆಳೆ ಒಣಗುವ ಸ್ಥಿತಿ ತಲುಪಿದ್ದರಿಂದ ಕಂಗಾಲಾದ ಅವರು, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆಯನ್ನು ಕೈಬಿಡಲು ಸಿದ್ಧರಿಲ್ಲದೆ ಟ್ಯಾಂಕರ್ ಮೊರೆ ಹೋಗಿದ್ದು, ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ನೀರು ತರಿಸಿ, ಹನಿ ನೀರಾವರಿ ಪದ್ಧತಿ ಅಥವಾ ಪೈಪ್ಗಳ ಮೂಲಕ ಹೊಲಕ್ಕೆ ಹರಿಸಿ ಬೆಳೆ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
ತಾಲೂಕಿನಾದ್ಯಂತ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಸಂಬಂಧಪಟ್ಟ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ರೈತರು
ಆಗ್ರಹಿಸಿದ್ದಾರೆ.