ತುಬಚಿ: ಇಂದಿನ ಮಕ್ಕಳು ನಾಳೆಯ ವಿಜ್ಞಾನಿಗಳಾಗುವ ಸಾಧ್ಯತೆ ಹೊಂದಿದ್ದಾರೆ. ಇಂತಹ ವಿಜ್ಞಾನ ಮತ್ತು ಕಲಾವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಕುತೂಹಲ ಹಾಗೂ ಸಂಶೋಧನಾ ಮನೋಭಾವ ಬೆಳೆಸುತ್ತವೆ ಎಂದು ಸಾವಳಗಿ ಪಿಎಸ್‌ಐ ಅಪ್ಪು ಐಗಿಳಿ ಹೇಳಿದರು.
ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ರಾಣಿ ಚನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ಕಲಾವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆಗೆ ಉತ್ತೇಜನ ನೀಡುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ತುಂಗಳ ವಲಯದ ಸಿಆರ್‌ಪಿ ಜಗದೀಶ್ ಕುಲೋಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಪ್ರಕೃತಿಯಲ್ಲಿ ನಡೆಯುವ ವಿಷಯಗಳನ್ನು ಸಾಮಾನ್ಯವಾಗಿ ನೋಡದೆ ವಿವಿಧ ದೃಷ್ಟಿಕೋನಗಳಿಂದ ಅವಲೋಕಿಸಬೇಕು. ಇದರಿಂದ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳಿಗೆ ದಾರಿ ತೆರೆದುಕೊಳ್ಳುತ್ತದೆ ಎಂದು ಹೇಳಿದರು.
ಡಾ. ಎಸ್.ಆರ್. ಬಾಲಪ್ಪನವರ ಮಾತನಾಡಿ, ಮಕ್ಕಳು ವೈಜ್ಞಾನಿಕ ಚಿಂತನೆ ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಹೊಸ ಪ್ರಯೋಗಗಳ ಮೂಲಕ ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು.
ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೌರಶಕ್ತಿ ಬಳಕೆ, ಮಳೆ ನೀರು ಸಂಗ್ರಹಣೆ, ತ್ಯಾಜ್ಯ ನಿರ್ವಹಣೆ ಹಾಗೂ ಸುಲಭ ಗಣಿತ ಸೂತ್ರಗಳಿಗೆ ಸಂಬಂಧಿ ಸಿದ ನೂರಾರು ಕಾರ್ಯನಿರ್ವಹಣೆಯ ಮಾದರಿಗಳನ್ನು ಪ್ರದರ್ಶಿಸಿದರು.
ವಿಜ್ಞಾನ ಮಾದರಿಗಳ ಜತೆಗೆ ಚಿತ್ರಕಲೆ, ಮಣ್ಣಿನ ಶಿಲ್ಪಗಳು ಹಾಗೂ ಹಳೆಯ ವಸ್ತುಗಳಿಂದ ತಯಾರಿಸಿದ ಆಕರ್ಷಕ ಕಲಾಕೃತಿಗಳು ಪ್ರೇಕ್ಷಕರ ಗಮನ ಸೆಳೆದವು.
ಶಾಲೆಯ ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾöಸಿದರು. ವಿದ್ಯಾರ್ಥಿಗಳು ತಮ್ಮ ಮಾದರಿಗಳ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಿದ ವಿವರಗಳು ಮೆಚ್ಚುಗೆಗೆ ಪಾತ್ರವಾದವು.