ಬಾಗಲಕೋಟೆ ನಗರದ ಯುಕೆಪಿ ಕಚೇರಿಯ ಸಂಗಮ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ನೇತೃತ್ವದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸಭೆ ಜರುಗಿತು. ಶಾಸಕರಾದ ಜೆ.ಟಿ. ಪಾಟೀಲ, ಉಮೇಶ ಮೇಟಿ, ಜಿಲ್ಲಾಽಕಾರಿ ಸಂಗಪ್ಪ ಎಂ. ಇದ್ದರು.
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಪರಿಹಾರ ಹಂಚಿಕೆಗೆ ಸಂಬಂಧಿಸಿದಂತೆ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ಮಾಹಿತಿ ಸಜ್ಜಾಗಿ ಇಟ್ಟುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನವನಗರದ ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿಯ ಸಂಗಮ ಸಭಾ ಭವನದಲ್ಲಿ ಶನಿವಾರ ಯುಕೆಪಿ ಯೋಜನೆಯಡಿ ಮುಳುಗಡೆ ಜಮೀನಿಗೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ನಿರ್ಮಾಣ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವಾರ್ಡ್ ಆಗಿರುವ ಹಾಗೂ ಅವಾರ್ಡ್ ಸ್ಟೇಜ್‌ನಲ್ಲಿರುವ ಜಮೀನುಗಳ ಸರ್ವೆ ಕಾರ್ಯ ಕೈಗೊಂಡು ಪರಿಹಾರ ಹಂಚಿಕೆ ಮಾಡಲು ಎಲ್ಲ ರೀತಿಯಿಂದ ಮಾಹಿತಿ ಸಜ್ಜಾಗಿರಬೇಕು. ಇದಕ್ಕಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ಮಾಡಲು ಸೂಚನೆ ನೀಡಿದ ಅವರು, ಆದ್ಯತೆ ಮೇರೆಗೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಧಿಕಾರಿಗಳು ಮಾನವೀಯತೆ ದೃಷ್ಟಿಯನ್ನು ಇಟ್ಟುಕೊಂಡು ಹಾಗೂ ನೋಂದ ಸಂತ್ರಸ್ತರಿಗೆ ಧ್ವನಿಯಾಗುವ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸೂಕ್ತ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.
ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ೩೩೦೦ ಎಕರೆ, ಬೀಳಗಿ ತಾಲೂಕಿನಲ್ಲಿ ೧೯೫೦೦ ಎಕರೆ ಜಮಖಂಡಿ ತಾಲೂಕಿನಲ್ಲಿ ೨೪೦೦ ಎಕರೆ ಹಾಗೂ ಬಾಗಲಕೋಟೆಯಲ್ಲಿ ೮೭೦೦ ಎಕೆರೆ ಜಮೀನು ಮುಳುಗಡೆಯಾಗುತ್ತಿರುವ ಬಗ್ಗೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಂಡರು.
ಪುನರ್ವಸತಿ ಕೇಂದ್ರಗಳಲ್ಲಿ ಶೇ. ೫೦ಕ್ಕಿಂತ ಹೆಚ್ಚಿಗೆ ಜನ ಸ್ಥಳಾಂತರವಾಗದಿದ್ದರೆ ಆ ಕೇಂದ್ರದಲ್ಲಿ ಅಲ್ಲಿರುವ ಸಮಸ್ಯೆಗಳು ಇದ್ದಲ್ಲಿ ಪರಿಹರಿಸುವ ಕೆಲಸವಾಗಬೇಕು. ಅಲ್ಲದೆ ಪ್ರತಿಯೊಂದು ಪುನರ್ವಸತಿ ಕೇಂದ್ರಗಳಲ್ಲಿ ಸ್ಮಶಾನ ಜಾಗ ಗುರುತಿಸಿ ಅದಕ್ಕೆ ಬೋರ್ಡ್ ಹಾಕುವ ಕೆಲಸವಾಗಬೇಕು. ಜಮಖಂಡಿ ಎಸ್‌ಎಲ್‌ಒಗಳು ಮುಂದಿನ ಐದು ದಿನಗಳಲ್ಲಿ ಗ್ರಾಮ ಸಭೆ ಕೈಗೊಂಡು ಸಂತ್ರಸ್ತರ ಅಹವಾಲುಗಳಿಗೆ ಸ್ಪಂದಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು. ಮೊದಲ ಹಂತದಲ್ಲಿ ೨೩ ಗ್ರಾಮಗಳ ಸಂತ್ರಸ್ತರ ಪಟ್ಟಿ ಸಿದ್ಧಪಡಿಸಲು ತಿಳಿಸಿದರು.
ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಮುಳುಗಡೆ ಹೊಂದಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಪರಿಹಾರ ನೀಡಲು ಜೂನ್ ೮ ಗಡುವು ನೀಡಿದ ಅವರು ಅಧಿಕಾರಿಗಳ ಕಾರ್ಯ ಮಹತ್ವವಾಗಿದ್ದು, ಪ್ರತಿ ವಾರಕ್ಕೊಮ್ಮೆ ತಮ್ಮ ಪ್ರಗತಿ ಕಾರ್ಯದ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಮುಳುಗಡೆಯಾಗುವ ಕಟ್ಟಡಗಳಿಗೆ ವಾಸ್ತವ ಬೆಲೆಕೊಡುವ ಕೆಲಸವಾಗಬೇಕು ಎಂದರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಕಂಕಣವಾಡಿ ಗ್ರಾಮ ನಡುಗಡೆಯಾಗಿದ್ದು, ಅಲ್ಲಿರುವ ಜನವಸತಿಯನ್ನು ಸಂಪೂರ್ಣವಾಗಿ ಸ್ಥಳಾಂತರಕ್ಕೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಶಾಸಕ ಉಮೇಶ ಮೇಟಿ, ಜಿಲ್ಲಾಧಿಕಾರಿ ಸಂಗಪ್ಪ, ಯುಕೆಪಿ ವ್ಯವಸ್ಥಾಪಕ ನಿರ್ದೇಶಕ ಗಜಾನನ ಬಾಲೆ, ಪುನರ್ವಸತಿ ಅಧಿಕಾರಿ ಮಹಾದೇವ ಮುರಗಿ ಸೇರಿ ಕೆಬಿಜೆಎನ್‌ಎಲ್ ಅಧಿಕಾರಿಗಳು, ಎಸ್‌ಎಲ್‌ಒಗಳು ಉಪಸ್ಥಿತರಿದ್ದರು.
ಮುಳುಗಡೆ ಸಂತ್ರಸ್ತರ ಅಹವಾಲು ಆಲಿಸಿದ ಸಚಿವರು
ಜುನ್ನೂರು, ಕಸಬಾಜಂಬಗಿ, ಟಕ್ಕಳಕಿ, ಯತ್ನಟ್ಟಿ, ಕಾತರಕಿ, ಮುದ್ದಾಪೂರ, ಮುಂಡಗನೂರ, ಗಲಗಲಿ, ಕೋವಳ್ಳಿ, ಬುದುಹಾಳ, ಹಿರೇಸಂಶಿ, ಚೌಡಾಪುರ ಸೇರಿದಂತೆ ವಿವಿಧ ಗ್ರಾಮದ ಸಂತ್ರಸ್ತರು ಸಚಿವರಿಗೆ ತಮ್ಮ ಬೇಡಿಕೆ, ಸಮಸ್ಯೆ ಪಟ್ಟಿ ಮೂಲಕ ಸಚಿವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಬಿ. ತಿಮ್ಮಾಪೂರ, ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-೩ರಡಿ ಮುಳುಗಡೆಯಾಗುವ ವಿವಿಧ ಗ್ರಾಮಗಳ ರೈತರ ಅಹವಾಲುಗಳನ್ನು ಆಲಿಸುವ ಮೂಲಕ ಸೂಕ್ತ ಕ್ರಮಕೈಗೊಳ್ಳುವ ಕೆಲಸ ಮಾಡಲಾಗುವುದು ಭರವಸೆ ನೀಡಿದರು. ಇನ್ನೂ ಐತೀರ್ಪು ಹೊರಡಿಸಿದರೆ, ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಸಂತ್ರಸ್ತರು ತಿಳಿಸಿದರು.