ಮಾನವೀಯ ದೃಷ್ಟಿಯಿಂದ ಪಪಂ ಎಂಟರಪ್ರೈಸಿಸ್ ನಿಧಿಯಿಂದ ವೇತನ ಪಾವತಿಸಲಾಗಿದೆ
ಅಮೀನಗಡ : ಪಪಂನಲ್ಲಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಕೆಲ ಸದಸ್ಯರು ಸುಳ್ಳು ಆರೋಪ ಮಾಡಿದ್ದು, ಅದು ಸತ್ಯಕ್ಕೆ ದೂರವಾದದ್ದು ಎಂದು ಪ.ಪಂ. ಅಧ್ಯಕ್ಷೆ ಬೇಬಿ ಚವಾಣ್ ಸ್ಪಷ್ಟನೆ ನೀಡಿದರು.
ಪಟ್ಟಣ ಪಂಚಾಯತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಬತ್ತು ತಿಂಗಳಿಂದ ಪಪಂನಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಅವರ ಕುಟುಂಬ ನಿರ್ವಹಣೆ ತುಂಬಾ ತೊಂದರೆಯಾಗಿತ್ತು. ಹಾಗಾಗಿ ಮಾನವೀಯ ದೃಷ್ಟಿಯಿಂದ ಪಪಂ ಎಂಟರಪ್ರೈಸಿಸ್ ನಿಧಿಯಿಂದ ವೇತನ ಪಾವತಿಸಲಾಗಿದೆ. ನಂತರ ಸಾಮಾನ್ಯ ನಿಧಿಯ ಖಾತೆಯಲ್ಲಿ ಜಮೆಯಾಗುವ ಮೊತ್ತವನ್ನು ಮರಳಿ ಎಂಟರಪ್ರೈಸಿಸ್ ನಿಧಿ ಖಾತೆಗೆ ಜಮೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಮತ್ತು ಸದ್ಯ ಸಾಮಾನ್ಯ ನಿಧಿಯಲ್ಲಿ ಜಮೆಯಿರುವ ಹಣವನ್ನು ಎಂಟರ್‌ಪ್ರೈಸಿಸ್ ಖಾತೆಗೆ ಜಮೆ ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಪಂಗೆ ಜಮೆಯಾದ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದು ಕೂಡ ಸತ್ಯಕ್ಕೆ ದೂರವಾಗಿದೆ. ಪಪಂಗೆ ಸಾಮಗ್ರಿಗಳ ಅವಶ್ಯಕತೆ ಇತ್ತು ಹಾಗಾಗಿ ಸಾಮಗ್ರಿಗಳನ್ನು ಖರೀದಿ ಮಾಡಿದ್ದು ನಿಜ. ಆದರೆ, ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಪಂಗೆ ಜಮೆಯಾದ ಹಣ ಬಳಸಿ ಸಾಮಗ್ರಿಗಳನ್ನು ಖರೀದಿ ಮಾಡಿ ಎಂದು ನಾವು ಹೇಳಿಲ್ಲ. ಅಲ್ಲಿಯ ಹಣ ಬಳಕೆ ಮಾಡಿದ್ದು ನಮಗೆ ಗೊತ್ತಿಲ್ಲ. ಅದು ಅಧಿಕಾರಿಗಳಿಗೆ ಗೊತ್ತು ಎಂದು ಹೇಳಿದರು.
ಪಪಂನಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಆರೋಪ ಮಾಡಿರುವ ಸದಸ್ಯರು ಒಂದು ದಿನ ಕೂಡ ತಮ್ಮ ವಾರ್ಡ್ ಅಭಿವೃದ್ಧಿ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡಿಲ್ಲ. ಆದರೆ, ಈಗ ಸುಖಾಸುಮ್ಮನೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಬೇಕಾದರೆ ತನಿಖೆ ಮಾಡಿಸಲಿ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದರು.