

ಬಾಗಲಕೋಟೆ: ರೈತರಿಗೆ ನ್ಯಾಯ ಸಮ್ಮತವಾಗಿ ಕಬ್ಬಿನ ಬೆಲೆ ನಿಗದಿ ಪಡಿಸುವ ನೀತಿಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕಿಸಾನ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟನ್ ಕಬ್ಬಿಗೆ 4700 ರೂ. ನಿಗದಿ ಪಡಿಸಬೇಕು. ಹಾಗೂ ರೈತರಿಗೆ ಕಬ್ಬು ಪೂರೈಸಿದ 15 ದಿನಗಳ ಒಳಗಾಗಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದರು.
ರೈತರು ಹಾಗೂ ಕಾರ್ಖಾನೆ ಮಧ್ಯೆ ಸೌಜನ್ಯಯುತವಾಗಿ ಇದ್ದರೆ ಮಾತ್ರ ಕಾರ್ಖಾನೆ ಹಾಗೂ ರೈತರು ಬದುಕಲಿಕ್ಕೆ ಸಾಧ್ಯ. ಕಬ್ಬು ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು ಇದು ಗ್ರಾಮೀಣ ಜನರ ಜೀವನಕ್ಕೆ ಆಧಾರವಾಗಿದೆ. ಕಬ್ಬಿನ ಬೆಲೆಗೆ ಸುಮಾರು 12 ತಿಂಗಳ ಕಾಲ ನಿರಂತರ ಹೂಡಿಕೆ ಮತ್ತು ನಿರ್ವಹಣೆ ಅಗತ್ಯವಿರುತ್ತದೆ. ರೈತರು ಅನಿಶ್ಚಿತ ಮಳೆ ಸೇರಿ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸಿ ಬೆಳೆಯನ್ನು ಬೆಳೆಯುತ್ತಾರೆ ಇವರಿಗೆ ನ್ಯಾಯವನ್ನು ಸರ್ಕಾರ ಹಾಗೂ ಕಾರ್ಖಾನೆಗಳು ಒದಗಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರಾಂತದ ಅಧ್ಯಕ್ಷ ವಿವೇಕ ಮೋರೆ ಮಾತನಾಡಿ, ರೈತರು ಒಂದು ಎಕರೆಗೆ ಕಬ್ಬು ಬೆಳೆಯಲು ಎಲ್ಲ ಖರ್ಚು ಸೇರಿ 1.53 ಲಕ್ಷ ರೂ. ಆಗುತ್ತದೆ. ಅದೇ ರೈತನಿಗೆ ಒಂದು ಎಕರೆಗೆ 40 ಟನ್ ಇಳುವರಿ ಬಂದರೆ ಟನ್‌ಗೆ 3500 ರೂ. ಲೆಕ್ಕ ಹಾಕಿದರೆ 1.40 ಲಕ್ಷ ರೂ. ಸಿಗುತ್ತಿದೆ. ಇದರಿಂದ ಆತನಿಗೆ 13 ಸಾವಿರ ರೂ. ನಷ್ಟ ಅನುಭವಿಸಬೇಕಾಗಿದೆ. ಅದೇ ಕಾರ್ಖಾನೆಯವರು ಅದೇ 40 ಟನ್‌ಗೆ ಸಕ್ಕರೆ, ಮೊಲಾಸಿಸ್, ಬಗಾಸ್, ಪ್ರೆಸ್‌ಮಡ್, ಬಗಾಸ್‌ನಿಂದ ವಿದ್ಯುತ್ ಉತ್ಪಾದನೆ, ಎಥೆನಾಲ್ ಮೌಲ್ಯವರ್ಧನೆ ಸೇರಿ 2,42,700 ರೂ. ಆಗುತ್ತಿದ್ದು, ಇದಕ್ಕೆ ಕಾರ್ಖಾನೆಯ ಎಲ್ಲ ವೆಚ್ಚವೂ ಸೇರಿ 1.90 ಲಕ್ಷ ರೂ. ಬರುತ್ತಿದೆ. ಇದರಿಂದ 52,700 ರೂ. ಕಾರ್ಖಾನೆಗೆ ಲಾಭವಾಗುತ್ತದೆ ಎಂದು ಅಂಕಿ-ಅಂಶವನ್ನು ವಿವರಿಸಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ರೈತರಿಂದ ಖರೀದಿಸಿದ ನಂತರ ಕೇವಲ ಸಕ್ಕರೆ ಅಲ್ಲದೇ ಮೊಲಾಸಿಸ್, ಬಗಾಸ್, ಎಥನಾಲ್, ವಿದ್ಯುತ್ ಉತ್ಪಾದನೆಯಿಂದ ಹೆಚ್ಚುವರಿ ಆದಾಯವನ್ನು ಕಾರ್ಖಾನೆಗಳು ಪಡೆಯುತ್ತಿದ್ದು, ಇದರ ಲಾಭಾಂಶವನ್ನು ಸಹಿತ ರೈತರಿಗೆ ನೀಡಬೇಕು. ರೈತರ ಶೋಷಣೆಯನ್ನು ಸರ್ಕಾರ ಹಾಗೂ ಕಾರ್ಖಾನೆಗಳು ಮಾಡಬಾರದು. ರೈತರ ಶ್ರಮವನ್ನು ಪರಿಗಣಿಸಿ ಎಫ್‌ಆರ್‌ಪಿ ದರ ಪರಿಷ್ಕರಿಸಬೇಕು. ಕಬ್ಬಿನ ಬಾಕಿಯನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಭೀಮಸೇನ ಕೋಕರೆ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಕಿಸಾನ ಸಂಘವು ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಎಲ್ಲ ಗ್ರಾಮಗಳಲ್ಲಿ ನಮ್ಮ ಸಂಘಟನೆ ಇದ್ದು ರೈತರ ಪರವಾಗಿ ಹೋರಾಟ ಮಾಡುತ್ತಿದೆ. ಕಬ್ಬಿನ ಬೆಲೆಯನ್ನು ನಿಗದಿಪಡಿಸಬೇಕು. ರೈತರಿಗೆ ನ್ಯಾಯಯುತ ಮತ್ತು ಗೌರವಯುತ ಆದಾಯ ದೊರೆಯುವಂತೆ ಕೇಂದ್ರ ಸರ್ಕಾರವು ಸೂಕ್ತ ನೀತಿಯನ್ನು ಜಾರಿಗೆ ತರಬೇಕು ಎಂದರು.
ಸುಬ್ಬರಾಯ ಪಾಟೀಲ, ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಇದ್ದರು.