ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ
ಕ್ರೀಡೆಯು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತಿದ್ದು, ಹಿರಿಯ ನಾಗರಿಕರು ಕೂಡ ತಮ್ಮ ವಯಸ್ಸಿಗೆ ಅನುಗುಣವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.
ನವನಗರದ ಅಗ್ನಿಶಾಮಕ ದಳದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ `ವಿಶ್ವ ಹಿರಿಯ ನಾಗರಿಕರ ದಿನಾಚರಣೆ' ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
60 ವರ್ಷ ದಾಟಿದ ಬಳಿಕವೂ ದೈಹಿಕ ಚಟುವಟಿಕೆಗಳನ್ನು ಮುಂದುವರಿಸುವುದು ಬಹಳ ಮುಖ್ಯವಾಗಿದೆ. ನಿಯಮಿತವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹದ ವಿವಿಧ ಅಂಗಾಂಗಗಳು ಸಕ್ರಿಯವಾಗಿರಲು, ದೇಹವನ್ನು ಸದೃಢವಾಗಿರಿಸಿಕೊಳ್ಳಲು ಹಾಗೂ ಮನಸ್ಸಿಗೆ ಚೈತನ್ಯ ದೊರೆಯಲು ಸಹಕಾರಿಯಾಗುತ್ತದೆ ಎಂದರು.
ಇಂದಿನ ಆಧುನಿಕ ಜೀವನಶೈಲಿಯಲ್ಲಿ ಬಹುತೇಕ ಸಮಯವನ್ನು ಎಸಿ ಕೊಠಡಿಗಳಲ್ಲಿ ಕಳೆಯುತ್ತಿರುವುದರಿಂದ ನೈಸರ್ಗಿಕ ಸೂರ್ಯನ ಬೆಳಕಿನ ಸಂಪರ್ಕ ಕಡಿಮೆಯಾಗುತ್ತಿದೆ. ಇದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಸೇರಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದರೆ, ಹಿರಿಯ ನಾಗರಿಕರು ದೈಹಿಕ ಚಟುವಟಿಕೆ, ಕ್ರೀಡೆ ಹಾಗೂ ನೈಸರ್ಗಿಕ ವಾತಾವರಣದಲ್ಲಿ ಸಮಯ ಕಳೆಯುವ ಮೂಲಕ ತಮ್ಮ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಹಿರಿಯ ನಾಗರಿಕ ಸಿದ್ದಲಿಂಗಪ್ಪ ಗುಳೇದ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಜೀವನದ ಬಹುಪಾಲು ಸಮಯವನ್ನು ಕುಟುಂಬದ ಜವಾಬ್ದಾರಿಗಳು ಹಾಗೂ ಸಾಮಾಜಿಕ ವ್ಯವಸ್ಥೆಯ ವಿವಿಧ ಜಂಜಾಟಗಳ ನಡುವೆ ಕಳೆದಿರುತ್ತಾರೆ. ವಯಸ್ಸಾದ ನಂತರವೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಿರಿಯರಿಗೆ ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಲ್ಲಾಸ ನೀಡುವುದರ ಜತೆಗೆ ಅವರಲ್ಲಿ ಹೊಸ ಚೈತನ್ಯ ಮೂಡಿಸುತ್ತವೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ. ಮಾತನಾಡಿ, ಹಿರಿಯ ನಾಗರಿಕರ ಜೀವನದಲ್ಲಿ ಸಂತಸ ಹಾಗೂ ಉತ್ಸಾಹ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಬಾಲ್ಯದಲ್ಲಿ ಆಟವಾಡಿದ ದಿನಗಳ ನೆನಪುಗಳನ್ನು ಮರುಕಳಿಸುವ ರೀತಿಯಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಂಗವಿಕಲರ, ಹಿರಿಯ ನಾಗರಿಕರ ಕಲ್ಯಾಣಾಽಕಾರಿ ಮಹಾಂತೇಶ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಅಗ್ನಿಶಾಮಕ ದಳದ ಅಽಕಾರಿ ಪ್ರಕಾಶ ಪವಾರ ಸೇರಿ ಇತರರು ಉಪಸ್ಥಿತರಿದ್ದರು, ಎಂ.ಆರ್.ಡಬ್ಲೂ . ಎಂ.ಬಿ.ಪಾಟೀಲ ಸ್ವಾಗತಿಸಿದರು. ಎಸ್.ಟಿ.ಬೀರಗೊಂಡರ ವಂದಿಸಿದರು. ಎಂ.ಬಿ.ಮುದ್ನೂರ ನಿರೂಪಿಸಿದರು.