ಸಾವಯವ ಕೃಷಿಯೇ ಶಾಶ್ವತ ಪರಿಹಾರ

ಆಲಗೂರಿನ ಪಂಚ ಕಲ್ಯಾಣ ಮಹಾಮಹೋತ್ಸವಕ್ಕೆ ತೆರಳುವ ವೇಳೆ, ಜೈನ ಮುನಿ ಆಚಾರ್ಯ 108 ಗುಣಧರ ನಂದಿ ಮಹಾರಾಜರು ಹಳಿಂಗಳಿ ಗ್ರಾಮದ ಡಾ. ಧನಪಾಲ ಯಲಟ್ಟಿ ಅವರ ತೋಟದಲ್ಲಿ ಬಾಳೆ ಮತ್ತು ಪಪ್ಪಾಯಿ ಬೆಳೆಗಳನ್ನು ವೀಕ್ಷಿಸಿದರು. ಪರಪ್ಪ ಹಿಪ್ಪರಗಿ, ಅರಿಹಂತ ಹುಲಕುಂದ, ರಾಜು ನಂದೆಪ್ಪನವರ, ರಾಯಪ್ಪ ತಿಮ್ಮಣ್ಣವರ, ಮಾಧುಗೌಡ ಪಾಟೀಲ ಇತರರಿದ್ದರು.
ಆಲಗೂರಿನ ಪಂಚ ಕಲ್ಯಾಣ ಮಹಾಮಹೋತ್ಸವಕ್ಕೆ ತೆರಳುವ ವೇಳೆ, ಜೈನ ಮುನಿ ಆಚಾರ್ಯ 108 ಗುಣಧರ ನಂದಿ ಮಹಾರಾಜರು ಹಳಿಂಗಳಿ ಗ್ರಾಮದ ಡಾ. ಧನಪಾಲ ಯಲಟ್ಟಿ ಅವರ ತೋಟದಲ್ಲಿ ಬಾಳೆ ಮತ್ತು ಪಪ್ಪಾಯಿ ಬೆಳೆಗಳನ್ನು ವೀಕ್ಷಿಸಿದರು. ಪರಪ್ಪ ಹಿಪ್ಪರಗಿ, ಅರಿಹಂತ ಹುಲಕುಂದ, ರಾಜು ನಂದೆಪ್ಪನವರ, ರಾಯಪ್ಪ ತಿಮ್ಮಣ್ಣವರ, ಮಾಧುಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೈನಮುನಿ 108 ಗುಣಧರ ನಂದಿ ಮಹಾರಾಜರ ಅಭಿಮತ
  • ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಅವಕಾಶ
  • ಜಾತಿ-ಧರ್ಮ ಭೇದವಿಲ್ಲದೆ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ
ರಬಕವಿ/ಬನಹಟ್ಟಿ : ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಮಣ್ಣಿನ ಸಂರಕ್ಷಣೆಗೆ ಸಾವಯವ ಕೃಷಿಯೇ ಶಾಶ್ವತ ಪರಿಹಾರ ಎಂದು ಜೈನ ಮುನಿ ಆಚಾರ್ಯ 108 ಗುಣಧರ ನಂದಿ ಮಹಾರಾಜರು ಹೇಳಿದರು.
ಆಲಗೂರಿನಲ್ಲಿ ನಡೆಯಲಿರುವ ಪಂಚ ಕಲ್ಯಾಣ ಮಹಾ ಮಹೋತ್ಸವಕ್ಕೆ ತೆರಳುವ ಮಾರ್ಗ ಮಧ್ಯೆ ಮಂಗಳವಾರ ವಿಹಾರದಲ್ಲಿ ತಂಗಿದ್ದ ಅವರು, ತಾಲೂಕಿನ ಹಳಿಂಗಳಿ ಗ್ರಾಮದ ರೈತ ಹಾಗೂ ಕೃಷಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಡಾ. ಧನಪಾಲ ಯಲಟ್ಟಿ ಅವರ ತೋಟಕ್ಕೆ ಭೇಟಿ ನೀಡಿ, ವಿವಿಧ ಬೆಳೆಗಳ ಬೆಳವಣಿಗೆಯನ್ನು ಪರಿಶೀಲಿಸಿದರು.
ವಿಶೇಷವಾಗಿ ಬಾಳೆ ಮತ್ತು ಪಪ್ಪಾಯಿ ಬಹುಬೆಳೆ ಕೃಷಿಯಲ್ಲಿ ಸಾಧಿಸಿರುವ ಯಶಸ್ಸನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಸಮೀಪದ ವರೂರಿನಲ್ಲಿ ಆರಂಭವಾಗುತ್ತಿರುವ ವಿಶ್ವವಿದ್ಯಾಲಯದಲ್ಲಿ ಬಡ ಮತ್ತು ಅನಾಥ ಮಕ್ಕಳಿಗೆ ಉಚಿತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ನೀಡುವ ಮಹತ್ವದ ಯೋಜನೆ ಕುರಿತು ತಿಳಿಸಿದರು. ಜಾತಿ-ಧರ್ಮ ಭೇದವಿಲ್ಲದೆ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಜೈನ ಸಮಾಜದ ಹಿರಿಯರಾದ ಪರಪ್ಪ ಹಿಪ್ಪರಗಿ, ಅರಿಹಂತ ಹುಲಕುಂದ, ರಾಜು ನಂದೆಪ್ಪನವರ, ರಾಯಪ್ಪ ತಿಮ್ಮಣ್ಣವರ, ಮಾಧುಗೌಡ ಪಾಟೀಲ, ಗಂಗಪ್ಪ ಮಗದುಮ್, ಕುಮಾರ ಯಲ್ಲಟ್ಟಿ ಸೇರಿ ನೂರಾರು ಶ್ರಾವಕ- ಶ್ರಾವಕಿಯರು ಇದ್ದರು. ಆಚಾರ್ಯರು ನಂತರ ಆಲಗೂರಿನತ್ತ ವಿಹಾರ ಕೈಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net