ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿ ಶ್ರೇಷ್ಠ

ಬಾಗಲಕೋಟೆ ಬಿವಿವಿ ಸಂಘದ ಮೂರು ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭದಲ್ಲಿ ನರ್ಸಿಂಗ್ ಪಿ.ಜಿ ಕೋರ್ಸನಲ್ಲಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ಮಹೇಶ್ವರಿ ಶಿರೋಳ ಅವರನ್ನು ರಾಜೀವಗಾಂಧಿ ಆರೋಗ್ಯ ವಿವಿ ಕುಲಸಚಿವ ಡಾ.ರಿಯಾಜ್ ಬಾಷಾ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸನ್ಮಾನಿಸಿದರು.
ಬಾಗಲಕೋಟೆ ಬಿವಿವಿ ಸಂಘದ ಮೂರು ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭದಲ್ಲಿ ನರ್ಸಿಂಗ್ ಪಿ.ಜಿ ಕೋರ್ಸನಲ್ಲಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ಮಹೇಶ್ವರಿ ಶಿರೋಳ ಅವರನ್ನು ರಾಜೀವಗಾಂಧಿ ಆರೋಗ್ಯ ವಿವಿ ಕುಲಸಚಿವ ಡಾ.ರಿಯಾಜ್ ಬಾಷಾ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸನ್ಮಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಸಚಿವ ಡಾ.ರಿಯಾಜ್ ಬಾಷಾ ಅಭಿಮತ
  • ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ
ಬಾಗಲಕೋಟೆ: ಸಮಾಜದ ಆರೋಗ್ಯಕ್ಕಾಗಿ ಶುಶ್ರೂಷಕರ ಕೊಡುಗೆ ಗಮನಾರ್ಹವಾಗಿದೆ. ನರ್ಸಿಂಗ್ ಪದವಿಧರರಾಗಿ ವೃತ್ತಿಕ್ಷೇತ್ರವನ್ನು ಪ್ರವೇಶಿಸುತ್ತಿರುವ ನಿಮ್ಮ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಶ್ರೇಷ್ಠ ವೃತ್ತಿಯಾಗಿದೆ ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಿಯಾಜ್ ಬಾಷಾ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಶನಿವಾರ ಸಜ್ಜಲಶ್ರೀ ನರ್ಸಿಂಗ್ ಕಾಲೇಜ್, ಬಿವಿವಿಎಸ್ ನರ್ಸಿಂಗ್ ಕಾಲೇಜ್ ಮತ್ತು ಶಾರದಾಂಬೆ ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪದವಿಧರರಾಗುವುದೆಂದರೆ ಅವಲಂಬನೆಯಿಂದ ಸ್ವಾವಲಂಬನೆಯತ್ತ ಪಯಣ. ನಿಮ್ಮ ಯಶಸ್ಸಿನಲ್ಲಿ ಪಾಲಕರ ಮತ್ತು ಶಿಕ್ಷಕರ ಶ್ರಮವಿದೆ. ಶಿಕ್ಷಣ ನೀಡಿದ ಸಂಸ್ಥೆಗೆ ಗೌರವ ತರುವಂತೆ ಆರೋಗ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಿವಿವಿ ಸಂಘವೂ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಸಿಬ್ಬಂದಿ ಕೊಡುಗೆ ಗಮನಾರ್ಹವಾಗಿದೆ. ಶುಶ್ರೂಷಕ ಸಿಬ್ಬಂದಿ ಆರೋಗ್ಯ ಕ್ಷೇತ್ರದ ಬೆನ್ನೆಲುಬು ಇದ್ದಂತೆ. ಕೋವಿಡ್ ಸಂದರ್ಭದಲ್ಲಿ ನರ್ಸಿಂಗ್ ವೃತ್ತಿ ಪರಿಣತರು ಸಲ್ಲಿಸಿದ ಸೇವೆ ಅಭಿನಂದನಾರ್ಹವಾಗಿದೆ. ನರ್ಸಿಂಗ್ ವಿಜ್ಞಾನದಲ್ಲಿ ಪದವಿ ಪಡೆದು ವೃತ್ತಿಕ್ಷೇತ್ರಕ್ಕೆ ಕಾಲಿಡುತ್ತಿರುವ ನೀವು ಸೇವಾಮನೋಭಾವವನ್ನು ಮೈಗೂಡಿಸಿಕೊಳ್ಳಿ ಎಂದರು.
ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ವೃತ್ತಿಯಲ್ಲಿರುವವರಿಗೆ ತರಬೇತಿ ನೀಡಲು 16 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಿಮ್ಯುಲೇಷನ್ ಲ್ಯಾಬ್ ಸ್ಥಾಪಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಶುಶ್ರೂಷಕರು ಇಲ್ಲಿ ತರಬೇತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಒಟ್ಟು 243 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನರ್ಸಿಂಗ್ ಪಿ.ಜಿ ಕೋರ್ಸನಲ್ಲಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ಮಹೇಶ್ವರಿ ಶಿರೋಳ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನರ್ಸಿಂಗ್ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದ ಡಾ.ಸ್ಟಿಫನ್ ಜಾನ್ ಪದವಿ ಪ್ರಮಾಣ ಪತ್ರ ಪಡೆದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ನರ್ಸಿಂಗ್ ಕಾಲೇಜುಗಳ ಪ್ರಾಚಾರ್ಯರಾದ ಡಾ. ದಿಲೀಪ ನಾಟೆಕರ್, ಜಯಶ್ರೀ ಇಟ್ಟಿ ಮತ್ತು ಡಾ. ಪ್ರವೀಣ ಪಾಟೀಲ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net