ಕೋಖಾ ಅಂಗಡಿಗಳಿಗೆ ನೋಟಿಸ್ ಜಾರಿ

 ತೇರದಾಳ ಪಟ್ಟಣದ ಮಹಾವೀರ ವೃತ್ತದ ರಾಜ್ಯ ಹೆದ್ದಾರಿ ಬಳಿಯಿರುವ ಕೆಲ ಕೋಕಾಗಳನ್ನು ಮುಖ್ಯಾಧಿಕಾರಿ ರ್ಇಾನ್ ಝಾರೆ ಹಾಗೂ ಸಿಬ್ಬಂದಿ ತೆರವುಗೊಳಿಸಿದರು.
ತೇರದಾಳ ಪಟ್ಟಣದ ಮಹಾವೀರ ವೃತ್ತದ ರಾಜ್ಯ ಹೆದ್ದಾರಿ ಬಳಿಯಿರುವ ಕೆಲ ಕೋಕಾಗಳನ್ನು ಮುಖ್ಯಾಧಿಕಾರಿ ರ್ಇಾನ್ ಝಾರೆ ಹಾಗೂ ಸಿಬ್ಬಂದಿ ತೆರವುಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತೇರದಾಳ ಪುರಸಭೆಯಿಂದ ಸೇವಾ ಶುಲ್ಕ ಪಾವತಿಸಲು ಸೂಚನೆ
  • ರಾಜ್ಯ ಹೆದ್ದಾರಿ ಬಳಿ ತೆರವು ಕಾರ್ಯ
  • ಕೋಖಾ ಅಂಗಡಿಗಳಿಂದ ಸ್ಥಳೀಯರೊಬ್ಬರು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ವಿಷಯ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ತೇರದಾಳ : ಜಮಖಂಡಿ-ಕಾಗವಾಡ ರಾಜ್ಯದ ಹೆದ್ದಾರಿ ಪಕ್ಕದ ಸ್ಥಳೀಯ ಮಹಾವೀರ ವೃತ್ತದ ಬಳಿಯಿರುವ ಕೋಖಾ ಅಂಗಡಿಗಳಿಗೆ ಸೇವಾ ಶುಲ್ಕ ಪಾವತಿಸುವಂತೆ ಸ್ಥಳೀಯ ಪುರಸಭೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಸ್ವೀಕರಿಸದ ಕೆಲ ಕೋಖಾ ಅಂಗಡಿಗಳನ್ನು ಅಧಿಕಾರಿಗಳು ಶನಿವಾರ ತೆರವುಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರು ಅಧಿಕಾರಿಯೊಂದಿಗೆ ಮಾತಿಗಿಳಿದು, ಅನೇಕ ಕೋಖಾ ಅಂಗಡಿಯವರು ಕಳೆದ ಕೆಲ ವರ್ಷಗಳಿಂದ ಎಸ್‌ಡಬ್ಲೂೃಎಂ ಸೇವಾ ಶುಲ್ಕ ತುಂಬದೇ ಇದ್ದರೂ, ಕೆಲವೇ ಅಂಗಡಿಗಳನ್ನು ಏಕೆ ತೆರವು ಮಾಡುತ್ತಿದ್ದಿರಿ? ನಿಮಗೆ ಶುಲ್ಕ ಪಾವತಿಸಿದರೂ ಮತ್ತೆ ಕರ ವಸೂಲಿಗಾರರು ನಮಗೆ ಕರ ಪಾವತಿಸುವಂತೆ ಒತ್ತಾಯಿಸುತ್ತಾರೆ ಎಂದು ಮುಖ್ಯಾಧಿಕಾರಿ ಇರ್ಫಾನ್ ಝಾರೆ ಅವರನ್ನು ಪ್ರಶ್ನಿಸಿದರು.
ಅಲ್ಲದೇ, ಇಲ್ಲಿನ ಕೆಲ ಕೋಖಾ ಅಂಗಡಿಗಳಿಂದ ಸ್ಥಳೀಯರೊಬ್ಬರು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ವಿಷಯ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ಜನರು ಕೋಖಾ ಅಂಗಡಿಗಳ ತೆರವು ಕಾರ್ಯವನ್ನು ವೀಕ್ಷಿಸಿದರು.
ಮಹಾವೀರ ವೃತ್ತದ ಭಾಗದಲ್ಲಿ 29 ಕೋಖಾ ಅಂಗಡಿಗಳಿದ್ದು, ಮಂಗಳವಾರದವರೆಗೆ ಒಂಬತ್ತು ವ್ಯಾಪಾರಸ್ಥರು ತಲಾ ಐದು ಸಾವಿರ ರೂ. ಪಾವತಿಸಿದ್ದಾರೆ. ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ 250 ಕೋಖಾ ಅಂಗಡಿಗಳಿವೆ. 2022ರ ಜುಲೈ ತಿಂಗಳಲ್ಲಿ ಕೋಖಾ ಅಂಗಡಿಗಳಿಗೆ ಐದು ಸಾವಿರ ರೂ. ಹಣ ಪಾವತಿಸಿಕೊಳ್ಳಲು ಅಂದಿನ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದೆ. ಆದರೆ ಕೋಖಾ ಅಂಗಡಿಗಳು ಇಷ್ಟೇ ಅಳತೆ ಮಿತಿಯಲ್ಲಿರಬೇಕೆಂಬ ಠರಾವು ಮಾಡಿಲ್ಲ. ಮಹಾವೀರ ವೃತ್ತದಲ್ಲಿನ ಕೋಖಾ ಅಂಗಡಿಗಳು ಸೇರಿ ಕೆಲವು ಕಡೆಗಳಲ್ಲಿನ ಕೋಖಾ ಅಂಗಡಿಗಳಿಗೆ ಕಳೆದ ವಾರದಿಂದ ನೋಟಿಸ್ ನೀಡಲಾಗುತ್ತಿದೆ.
ರಾಜ್ಯ ಹೆದ್ದಾರಿ ಮೇಲೆ ಕೋಖಾ ಅಂಗಡಿಗಳನ್ನು ಇಟ್ಟಿದ್ದರೂ ಲೋಕೋಪಯೋಗಿ ಇಲಾಖೆ ಅವರಿಗೆ ನೋಟಿಸ್ ನೀಡದೆ ಮೌನ ವಹಿಸಿರುವುದು ಸಂಶಯಕ್ಕೂ ಕಾರಣವಾಗಿದೆ.
"

ತೇರದಾಳದಲ್ಲಿ 250 ಕೋಖಾ ಅಂಗಡಿಗಳಿದ್ದು, ಹಲವರು ಐದು ಸಾವಿರ ರೂ. ಪಾವತಿ ಮಾಡಿದ್ದಾರೆ. ಇನ್ನೂ ಕೆಲವರು ಮಾಡಿಲ್ಲ. ಈ ಬಗ್ಗೆ ಪರಿಶೀಲಿಸಿ ನೋಟಿಸ್ ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಮಹಾವೀರ ವೃತ್ತದಲ್ಲಿನ ಕೋಖಾಗಳ ವಿಷಯದಲ್ಲಿ ಮಧ್ಯವರ್ತಿಗಳ ಹಾವಳಿ ಮೇಲ್ನೋಟಕ್ಕೆ ಕಂಡು ಬಂದಿದೆ. ಸಂತೆ ಕರ ವಸೂಲಿದಾರರೂ ಕೂಡ ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಸಂತೆ ಕರ ವಸೂಲಿ ಟೆಂಡರದಾರರಿಗೆ ಸೂಚನೆ ನೀಡಲಾಗುವುದು.
-ಇರ್ಫಾನ್ ಝಾರೆ. ಪುರಸಭೆ ಮುಖ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net