ಬೀದಿಬದಿ ಅಂಗಡಿಗಳ ಸ್ವಯಂಪ್ರೇರಿತ ತೆರವಿಗೆ ಸೂಚನೆ

ಗುಳೇದಗುಡ್ಡ ಶುಕ್ರವಾರ ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಮಾತನಾಡಿದರು. ತಹಸೀಲ್ದಾರ್ ಎಸ್. ಎಫ್. ಬೊಮ್ಮಣ್ಣವರ, ಕಮಲಕಿಶೋರ ಮಾಲಪಾಣಿ, ಸಂಜಯ ಬರಗುಂಡಿ ಇತರರಿದ್ದರು.
ಗುಳೇದಗುಡ್ಡ ಶುಕ್ರವಾರ ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಮಾತನಾಡಿದರು. ತಹಸೀಲ್ದಾರ್ ಎಸ್. ಎಫ್. ಬೊಮ್ಮಣ್ಣವರ, ಕಮಲಕಿಶೋರ ಮಾಲಪಾಣಿ, ಸಂಜಯ ಬರಗುಂಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಅಧ್ಯಕ್ಷತೆಯಲ್ಲಿ ವ್ಯಾಪಾರಸ್ಥರ ಸಭೆ
  • ಪರ್ಯಾಯ ವ್ಯವಸ್ಥೆ ಮಾಡಲು ಆಗ್ರಹ
  • ಭಾರತ್ ಮಾರ್ಕೆಟ್‌ನಲ್ಲಿ ರಸ್ತೆ ಅತಿಕ್ರಮಿಸಿ ಇಟ್ಟಿರುವ ಅಂಗಡಿಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಗುಳೇದಗುಡ್ಡ: ಪಟ್ಟಣದ ಭಾರತ್ ಮಾರ್ಕೆಟ್‌ನಲ್ಲಿ ರಸ್ತೆ ಅತಿಕ್ರಮಿಸಿ ಇಟ್ಟಿರುವ ಅಂಗಡಿಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅತಿಕ್ರಮಣ ಕೈಗೊಂಡ ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಸೂಚನೆ ನೀಡಿದರು.
ಪುರಸಭೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಸ್ಥರು ರಸ್ತೆಯಲ್ಲಿಯೇ ಇಟ್ಟು ವ್ಯಾಪಾರ ಮಾಡುವುದು ಕಾನೂನಿನಲ್ಲಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಮ್ಮ ವ್ಯಾಪಾರ ನಡೆಸಬೇಕು. ಇಂತಹ ಅಂಗಡಿಕಾರರಿಗೆ ಪ್ರಕಟಣೆ ಮೂಲಕ ತಿಳಿಸಿದ್ದೇವೆ. ಆದರೂ ರಸ್ತೆಬದಿಯಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ವ್ಯಾಪಾರಸ್ಥರು ರಸ್ತೆಯ ಎರಡು ಕಡೆಗಳಲ್ಲಿ ಅಂಗಡಿ ಇಟ್ಟು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಅವರು ಎಲ್ಲ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೇ ಪುರಸಭೆ ಆಡಳಿತಾಧಿಕಾರಿಗಳು ಕೂಡ ಸಭೆ ನಡೆಸಿ, ಎಲ್ಲ ಪಕ್ಷದವರನ್ನು ಕೂಡಿಸಿ, ಅಂಗಡಿಕಾರರಿಗೆ ಅರಿವು ಮೂಡಿಸಿ, ಅವರು ಹಠ ಮಾಡಿದರೆ ಕಾನೂನು ಪ್ರಕ್ರಿಯೇ ನಡೆಸಿ ಎಂದು ಹೇಳಿದ್ದಾರೆ. ಹೀಗಾಗಿ ಈ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಾದಾಮಿ ನಾಕಾದಿಂದ ಬನ್ನಿಕಟ್ಟಿ ಅಲ್ಲಿಂದ ಬಿಎಸ್‌ಎನ್‌ಲ್ ಆಫೀಸ್‌ವರೆಗಿನ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ರಸ್ತೆಯನ್ನು ಮಾರ್ಕಿಂಗ್‌ಮಾಡಿ ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡುತ್ತೇವೆ. ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕರು ಪುರಸಭೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅನುದಾನದಲ್ಲಿ ಸುಮಾರು 6.27 ಕೋಟಿ ರೂ. ವೆಚ್ಚದಲ್ಲಿ ಭಾರತ್ ಮಾರ್ಕೆಟ್‌ನ ನವೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ತರಲಾಗುತ್ತಿದೆ. ಬೀದಿ ಬದಿ ವ್ಯಾಪಾರಸ್ಥರ ಅವಶ್ಯಕತೆ ಸಾಕಾರಗೊಳ್ಳುವ ಕಾಲ ಆದಷ್ಟು ಬೇಗ ಬರಲಿದೆ. ಬೀದಿ ಬದಿ ವ್ಯಾಪಾರಸ್ಥರು ಪರವಾನಗಿ ಪಡೆದುಕೊಳ್ಳಬೇಕು ಇದರಿಂದ ಸರ್ಕಾರ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದರು.
ಮಾರ್ಕೆಟ್‌ನಲ್ಲಿ ನೂರರಿಂದ, ನೂರಾ ಐವತ್ತು ಅಂಗಡಿಗಳಿದ್ದು, ಈ ಅಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ, ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಿ. ಹೀಗೆ ಏಕಾಏಕಿ ಅಂಗಡಿ ಕಿತ್ತಿಸಿದರೆ ನಮ್ಮ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಬೀದಿ ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಬಿಜೆಪಿ ಮುಖಂಡ ಕಮಲಕಿಶೋರ ಮಾಲಪಾಣಿ ಮಾತನಾಡಿ, ಬೀದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿ, ಅವರನ್ನು ತೆರವುಗೊಳಿಸಿ. ನೀವು ಏಕಾಏಕಿ ತೆರವುಗೊಳಿಸಿದರೆ ಅವರ ಕುಟುಂಬಕ್ಕೆ ತೊಂದರೆಯಾಗುತ್ತದೆ.
ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆಯಾದರೆ ಅವರೊಂದಿಗೆ ನಾವು ನಿಲ್ಲುತ್ತೇವೆ. ಪುರಸಭೆ ಜಾಗವನ್ನು ಲೀಸ್ ಪಡೆದುಕೊಂಡು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ಪಡೆದುಕೊಳ್ಳುತ್ತಿದ್ದಾರೆ. ಲೀಸ್ ಪಡೆದುಕೊಂಡವರೇ ವ್ಯಾಪಾರ ಮಾಡಬೇಕು. ಇಲ್ಲವಾದಲ್ಲಿ ಅಂತವರ ಮೇಲೆ ಕ್ರಮಕೈಗೊಳ್ಳಬೇಕು. ಭಾರತ್ ಮಾರ್ಕೆಟ್ ಹತ್ತಿರದ ಧೋಂಗಡೆಯವರ ಅಂಗಡಿ ಹಿಂದೆ ಇರುವ ಪುರಸಭೆ ಜಾಗವನ್ನು ಅಭಿವೃದ್ಧಿ ಪಡಿಸಿ, ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುವಂತೆ ಆಗ್ರಹಿಸಿದರು.
ಪ್ರಕಾಶ ಮುರಗೋಡ ಮಾತನಾಡಿ, ಪುರಸಭೆ ಜಾಗದಲ್ಲಿ ಖೋಕಾ ಅಂಗಡಿಯನ್ನಿಟ್ಟು ಬೇರೆಯವರಿಗೆ ಬಾಡಿಗೆ ನೀಡಿ, ಸಾವಿರಾರು ರೂಪಾಯಿ ಬಾಡಿಗೆ ತಿನ್ನುತ್ತಿದ್ದಾರೆ. ಅವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ ಸಣ್ಣಪುಟ್ಟ ಬೀದಿ ಬದಿ ವ್ಯಾಪರಸ್ಥರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ಪುರಸಭೆ ವಾಣಿಜ್ಯ ಮಳಿಗೆ ಲೀಸ್ ಪಡೆದವರೇ ವ್ಯಾಪಾರ ಮಾಡಬೇಕು. ಬೇರೆಯವರಿಗೆ ಬಾಡಿಗೆ ನೀಡಿದ್ದರೆ ಅಂತವರ ಲೀಸ್ ಕ್ಯಾನ್ಸ್‌ಲ್ ಮಾಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಎಸ್.ಎಫ್. ಬೊಮ್ಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ನಾಮನಿರ್ದೇಶನ ಸದಸ್ಯರಾದ ಚಿದಾನಂದಸಾ ಕಾಟವಾ, ಶಿವಾನಂದ ಮಳೀಮಠ, ಜಮೀರ ಮೌಲ್ವಿ, ಹನಮಂತಪ್ಪ ಕಟಗೇರಿ, ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ವಸಂತಸಾ ಧೋಂಗಡೆ, ಶ್ರೀಕಾಂತ ಭಾವಿ, ನಗರ ಮೋಜನಿ ಇಲಾಖೆ ಅಧಿಕಾರಿ ಶ್ರೀಕಾಂತ ಹೊಸಮನಿ, ಸಿದ್ದು ಅರಕಲಚಿಟ್ಟಿ, ಮದುಸೂಧನ ರಾಂದಡ, ಸಂಗಪ್ಪ ಚೆಟ್ಟೇರ, ಸಂಗಣ್ಣ ಹುನಗುಂದ, ಭಾಗ್ಯಾ ಉದ್ನೂರ ಸೇರಿ ಬೀದಿಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net